ದೇಶ

ಚಾಂದಿನಿ ಚೌಕ್ ಹಿಂಸಾಚಾರ: ದೆಹಲಿ ಪೊಲೀಸ್ ಆಯುಕ್ತರಿಗೆ ಅಮಿತ್ ಶಾ ಬುಲಾವ್

Lingaraj Badiger
ನವದೆಹಲಿ: ಕಳೆದ ಭಾನುವಾರ ರಾತ್ರಿ ದೆಹಲಿ ಚಾಂದಿನಿ ಚೌಕ್ ನ ಹೌಜ್ ಕಾಜಿ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಹಾಗೂ ಹಿಂಸಾಚಾರ ನಂತರದ ಪರಿಸ್ಥಿತಿಯ ಮಾಹಿತಿ ಪಡೆದುಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು.
ದೆಹಲಿ ಪೊಲೀಸ್ ಆಯುಕ್ತರು, ಗೃಹ ಸಚಿವರನ್ನು ಸಂಸತ್ತಿನ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಚಾಂದಿನಿ ಚೌಕ್ ಪ್ರದೇಶದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ವಿವರಿಸಿ, ಘಟನೆ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.
ಗೃಹ ಸಚಿವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಪಟ್ನಾಯಕ್, ಹಿಂಸಾಚಾರ ಪರಿಸ್ಥಿತಿ ಕುರಿತಂತೆ ಕೇಂದ್ರ ಗೃಹ ಸಚಿವರಿಗೆ ವಿವರವಾದ ಮಾಹಿತಿ ಒದಗಿಸಿದ್ದೇನೆ ಎಂದರು.
ಭಾನುವಾರ ರಾತ್ರಿ 10.30ರಲ್ಲಿ ಸ್ಥಳೀಯ ಹಣ್ಣಿನ ವ್ಯಾಪಾರಿ ಸಂಜೀವ್ ಗುಪ್ತಾ, ಹೌಜ್ ಕಾಜಿ ಪ್ರದೇಶದಲ್ಲಿರುವ ತಮ್ಮ ಮನೆಯ ಹೊರಗೆ, ವಾಹನ ನಿಲ್ಲಿಸಿದ್ದ ಆಯಾಸ್ ಮುಹಮದ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಸ್ಥಳದಿಂದ ತೆರಳಿದ್ದ ಮುಹಮದ್ ನಂತರ, ತನ್ನ ಬೆಂಬಲಗರೊಂದಿಗೆ ವಾಪಸ್ಸು ಬಂದು ಸಂಜೀವ್ ಗುಪ್ತಾ ಮನೆಯ ಮೇಲೆ ದಾಳಿ ನಡೆಸಿದ್ದರು.
ವಾಹನ ನಿಲುಗಡೆ ವಿಷಯದಲ್ಲಿ ಮಾತಿನ ಚಕಮಕಿಯಿಂದ ಭಾನುವಾರ ರಾತ್ರಿ ಉಂಟಾದ ಹಿಂಸಾಚಾರ ಘಟನೆ ಸಂಬಂಧ ಓರ್ವ ಆಪ್ರಾಪ್ತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರದೇಶದಲ್ಲಿ 1,000 ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಭಾನುವಾರದಿಂದ ಅಂಗಡಿ, ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಸ್ಥಳೀಯರು ಶಾಂತಿ ಸಭೆ ನಡೆಸಿದ್ದಾರೆ.
ಸ್ಥಳೀಯ ಸಂಸದರೂ ಆಗಿರುವ, ಕೇಂದ್ರ ಸಚಿವ ಡಾ. ಹರ್ಷ ವರ್ಧನ್, ಬಿಜೆಪಿ ಸಂಸದ ವಿಜಯ್ ಗೋಯಲ್ ಸೋಮವಾರ ಪ್ರದೇಶಕ್ಕೆ ಭೇಟಿ ನೀಡಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಜನರಿಗೆ ಮನವಿ ಮಾಡಿದ್ದರು.
SCROLL FOR NEXT