ದೇಶ

ದೇಶದ್ರೋಹ ಪ್ರಕರಣ: ಎಂಡಿಎಂಕೆ ನಾಯಕ ವೈಕೊಗೆ ಒಂದು ವರ್ಷ ಜೈಲು

Raghavendra Adiga
ಚೆನ್ನೈ: ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿವಿ. ಗೋಪಾಲಸ್ವಾಮಿ (ವೈಕೊ) ತಪ್ಪಿತಸ್ಥರೆಂದು  ಘೋಷಿಸಲಾಗಿದ್ದು ಇಲ್ಲಿನ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.  
 ಶ್ರೀಲಂಕಾ ಮೂಲದ ಪ್ರತ್ಯೇಕತಾವಾದಿ ಸಂಘಟನೆ ಎಲ್‌ಟಿಟಿಇಯನ್ನು ಬೆಂಬಲಿಸಿ 2009 ರಲ್ಲಿ ಮಾಡಿದ್ದ ಭಾಷಣಕ್ಕೆ ಸಾಂಬಂಧಿಸಿ ವೈಕೋ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿತ್ತು.
ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಪ್ರತ್ಯೇಕವಾಗಿ ಆಲಿಸುವ ವಿಶೇಷ ನ್ಯಾಯಾಲಯವು ದೇಶದ್ರೋಹಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 124 (ಎ) ಅಡಿಯಲ್ಲಿ ವೈಕೊ ತಪ್ಪಿತಸ್ಥರೆಂದು ಹೇಳಿದ್ದು ಅವರಿಗೆ 1 ವರ್ಷ ಸರಳ ಜೈಲು ಶಿಕ್ಷೆ ಮತ್ತು 10,000 ರೂ.ದಂಡ ಹಾಕಿದೆ.
ನ್ಯಾಯಾಲಯದ ತೀರ್ಪಿನ ಬಳಿಕ ಮಾತನಾಡಿದ ವೈಕೋ "ನ್ಯಾಯಾಧೀಶರ ಮನಸ್ಸಿನಲ್ಲಿ ವಿಷವಿರುವ ಕಾರಣ ಈ ಬಗೆಯ ತೀರ್ಪು ಬಂದಿದೆ. ಈ ತೀರ್ಪಿಗೆ ಹೆದರಿ ನಾನು ಮಾತನಾಡುವುದನ್ನು ನಿಲ್ಲಿಸಲಾರೆ" ಎಂದಿದ್ದಾರೆ.
ವಿಪರ್ಯಾಸವೆಂದರೆ ವೈಕೋ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದ ಡಿಎಂಕೆ ಪ್ರಸ್ತುತ ತಮಿಳುನಾಡು ರಾಜ್ಯಸಭೆ ಸ್ಥಾನಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ವೈಕೋಗೆ ಬೆಂಬಲಿಸಿದೆ. ಅವರು ನಾಳೆಯಷ್ಟೇ ನಾಮಪತ್ರ ಸಲ್ಲಿಸುವವರಿದ್ದಾರೆ.
SCROLL FOR NEXT