ದೇಶ

ತಿವಾರೆ ಅಣೆಕಟ್ಟು ಬಗ್ಗೆ ಅಸಂಬದ್ಧ ಹೇಳಿಕೆ: ಮಹಾರಾಷ್ಟ್ರ ಸಚಿವರ ನಿವಾಸದ ಹೊರಗಡೆ ಏಡಿ ಸುರಿದು ಪ್ರತಿಭಟನೆ

Nagaraja AB
ಮುಂಬೈ:  ರತ್ನ ಗಿರಿ ಜಿಲ್ಲೆಯ ತಿವಾರೆ ಅಣೆಕಟ್ಟು ಒಡೆಯಲು ಏಡಿಗಳೇ ಕಾರಣ ಎಂದು ಅಸಂಬದ್ಧ ಹೇಳಿಕೆ ನೀಡಿದ್ದ ಮಹಾರಾಷ್ಟ್ರ  ಜಲ ಸಂರಕ್ಷಣಾ ಸಚಿವ ತಾನಾಜಿ ಸವಾಂತ್ ಮನೆಯ ಹೊರಗಡೆ ಏಡಿಗಳನ್ನು ಸುರಿದು ಎನ್ ಸಿಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ.
ನಂತರ ಈ ಏಡಿಗಳನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡ ಹೋದ ಎನ್ ಸಿಪಿ ಮಹಿಳಾ ವಿಭಾಗದ ಕಾರ್ಯಕರ್ತರು, ಸಚಿವರ ಮನೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದ ಏಡಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ತಿವಾರೆ ಜಲಾಶಯ ಒಡೆದು 20 ಜನರು ಮೃತಪಟ್ಟಿದ್ದರು. ಈ ಸಂಬಂಧ ಹೇಳಿಕೆ ನೀಡಿದ್ದ ಸಚಿವ ತಾನಾಜಿ ಸವಾಂತ್,  ಜಲಾಶಯದಿಂದ ಈ ಹಿಂದೆ ಯಾವಾಗಲೂ ಸೋರಿಕೆ ಕಂಡುಬಂದಿರಲಿಲ್ಲ. ಅಣೆಕಟ್ಟಿನಲ್ಲಿ ಅಪಾರ ಪ್ರಮಾಣದ ಏಡಿಗಳು ಕಂಡುಬಂದ ನಂತರ ಸೋರಿಕೆಯಾಗಿದೆ. ಈ ಬಗ್ಗೆ ಸ್ಥಳೀಯರು ನೀಡಿರುವ ದೂರು ತಮ್ಮ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಇಲಾಖೆ  ಕಾರ್ಯೋನ್ಮುಖವಾಗಿದೆ. ಈ ಘಟನೆ ದುರದೃಷ್ಟಕರ ಎಂದಿದ್ದರು. 
ಕಳೆದ ವಾರ ಎನ್ ಸಿಪಿ ಮುಖಂಡ ಜೀತೇಂದ್ರ ಅವಾಡೆ ನೌಪಾದಾ ಠಾಣೆ ಮುಂಭಾಗ ಏಡಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಧಾರಾಕಾರ ಮಳೆಯಿಂದಾಗಿ ಜುಲೈ 3 ರಂದು ತಿವಾರೆ ಜಲಾಶಯ ಒಡೆದಿತ್ತು. ಇದರಿಂದಾಗಿ ಏಳು ಹಳ್ಳಿಗಳು ಜಲಾವೃತಗೊಂಡು,ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದೆ. 
SCROLL FOR NEXT