ಮೈತ್ರಿಗೆ ಮತ್ತೊಂದು ಮರ್ಮಾಘಾತ: ಬಂಡಾಯ ಶಾಸಕರಿಂದ ಮತ್ತೊಂದು ಅಘಾತಕಾರಿ ಮಾಹಿತಿ ಬಹಿರಂಗ!
ಮುಂಬೈ: ಮುಂಬೈ ನಲ್ಲಿರುವ ಕರ್ನಾಟಕದ ಬಂಡಾಯ ಶಾಸಕರು ರಾಜೀನಾಮೆ ನೀಡುವುದಿಲ್ಲ. ಎಂಟಿಬಿ ನಾಗರಾಜ್ ಈಗಾಗಲೇ ನಮ್ಮನ್ನು ಸೇರಿಕೊಂಡಿದ್ದಾರೆ. ಸುಧಾಕರ್ ಕೂಡಾ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಬಂಡಾಯವೆದ್ದಿರುವ ಕಾಂಗ್ರೆಸ್ ಶಾಸಕರು ಜು.14 ರಂದು ಮುಂಬೈ ಹೊಟೆಲ್ ನಿಂದಲೇ ಸುದ್ದಿಗೋಷ್ಠಿ ನಡೆಸಿದ್ದು, ಇಲ್ಲಿರುವ 12 ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಂಟಿಬಿ ನಾಗರಾಜ್ ಅವರು ಬಂಡಾಯ ಶಾಸಕರ ಮನವೊಲಿಕೆಗಾಗಿ ಮುಂಬೈ ಗೆ ಬಂದಿದ್ದಾರೆ ಎಂಬ ವರದಿ ಪ್ರಕಟವಾಗಿದೆ. ಆದರೆ ಅವರು ಮನವೊಲಿಕೆಗಾಗಿ ಬಂದಿಲ್ಲ. ಬದಲಾಗಿ ಅವರೂ ನಮ್ಮ ಜೊತೆ ಸೇರಿಕೊಂಡಿದ್ದಾರೆ. ಅವರೊಂದಿಗೆ ರಾಜೀನಾಮೆ ನೀಡಿದ್ದ ಡಾ. ಸುಧಾಕರ್ ದೆಹಲಿಯಲ್ಲಿದ್ದು ಅವರೂ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಿರುವ ನಮ್ಮ ನಿಲುವನ್ನು ಬದಲಾವಣೆ ಮಾಡುವುದಿಲ್ಲ, ಮುಂಬೈ ನಲ್ಲಿರುವ ಶಾಸಕರ ನಡುವೆ ಗುಂಪುಗಾರಿಕೆ ಇಲ್ಲ, ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ, ಯಾರನ್ನೂ ಸಂಪರ್ಕಿಸಲು ತಯಾರಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. ರಾಜೀನಾಮೆ ನೀಡಿದ ಸಂದರ್ಭದಲ್ಲಿ ಡಾ.ಸುಧಾಕರ್ ಮೇಲೆ ನಡೆದಿರುವ ಹಲ್ಲೆ ಖಂಡನೀಯ ಎಂದು ಬಂಡಾಯ ಶಾಸಕರು ಹೇಳಿದ್ದಾರೆ.