ಕೇಂದ್ರ ರಕ್ಷಣಾ ಇಲಾಖೆಗೆ ದೇಣಿಗೆ ನೀಡಿದ ನಿವೃತ್ತ ಯೋಧ ಸಿಬಿಆರ್ ಪ್ರಸಾದ್
ನವದೆಹಲಿ: ಕೋಟಿ ಸಂಪಾದನೆ ಮಾಡಲು ಜನ ನಾನಾ ಸಾಹಸ ಪಡುತ್ತಾರೆ. ರಸ್ತೆಯಲ್ಲಿ ಸಿಕ್ಕ ನೂರು ರೂವನ್ನೇ ಜನ ಬೇರೊಬ್ಬರಿಗೆ ಕೊಡಲು ಒಪ್ಪುವುದಿಲ್ಲ. ಆದರೆ ಇಲ್ಲೊಬ್ಬ ನಿವೃತ್ತ ಯೋಧ ತಾನು ತನ್ನ ಜೀವನವಿಡೀ ಕಷ್ಟ ಪಟ್ಟು ದುಡಿದ ಬರೊಬ್ಬರಿ 1 ಕೋಟಿ ರೂಗಳನ್ನು ರಾಷ್ಟ್ರೀಯ ರಕ್ಷಣಾ ಸಚಿವಾಲಯಕ್ಕೆ ದೇಣಿಗೆ ನೀಡಿದ್ದಾರೆ.
ಹೌದು.. 74 ವರ್ಷದ ಸಿಬಿಆರ್ ಪ್ರಸಾದ್ ಎನ್ನುವ ಮಾಜಿ ವಾಯುಸೇನಾ ಅಧಿಕಾರಿ, ರಕ್ಷಣಾ ಇಲಾಖೆಗೆ ತಮ್ಮ ಜೀವನವಿಡೀ ಉಳಿತಾಯ ಮಾಡಿದ್ದ 1.8 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ. ಸುಮಾರು 9 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪ್ರಸಾದ್ ಅವರು ಬಳಿಕ ತಮ್ಮದೇ ಆದ ಪೌಲ್ಟ್ರಿ ಆರಂಭಿಸಿದ್ದರು. ಆರಂಭದಲ್ಲಿ ಏಳು ಬೀಳಿನಿಂದ ಕೂಡಿದ್ದ ಪೌಲ್ಟ್ರಿ ವ್ಯಾಪಾದಲ್ಲಿ ದೃತಿಗೆಡದೇ ಅದರಲ್ಲಿ ಯಶಸ್ಸು ಕೂಡ ಸಾಧಿಸಿದರು. ಇದೇ ಪೌಲ್ಟ್ರಿ ನೆರವಿನೊಂದಿಗೆ ಸಿಬಿಆರ್ ಪ್ರಸಾದ್ ಅವರು ಸಂಪಾದಿಸಿದ್ದ ಸುಮಾರು 1.08 ಕೋಟಿ ರೂಗಳನ್ನು ರಕ್ಷಣಾ ಸಚಿವಾಲಾಯಕ್ಕೆ ದೇಣಿಗೆಯಾಗಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಸಾದ್ ಅವರು, 'ನಾನು 9 ವರ್ಷ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದೆ. ನಂತರ ನನಗೆ ಭಾರತೀಯ ರೇಲ್ವೆ ಇಲಾಖೆಯಲ್ಲಿ ಒಳ್ಳೆಯ ಉದ್ಯೋಗ ಅರಸಿ ಬಂತು. ಆದರೆ ಕಾರಣಾಂತರಗಳಿಂದ ನಾನು ಹೋಗಲಿಲ್ಲ. ಅದರ ಬದಲಾಗಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿದೆ. ಅದೃಷ್ಟವಶಾತ್ ಅದು ನನ್ನ ಕೈ ಹಿಡಿಯಿತು. ನನ್ನ ಎಲ್ಲಾ ಕೌಟುಂಬಿಕ ಜವಾಬ್ದಾರಿ ನಿರ್ವಹಿಸಿದ ಮೇಲೆ ನಾನು ಸೇವೆ ಸಲ್ಲಿಸಿದ ಸೇನೆಗೆ ಏನಾದರೂ ಮಾಡಬೇಕು ಅನ್ನೋ ತುಡಿತ ಹುಟ್ಟಿತು. ಹೀಗಾಗಿ ನಾನು ಉಳಿತಾಯ ಮಾಡಿದ್ದ ಸುಮಾರು 1.08 ಕೋಟಿ ರೂಪಾಯಿಯನ್ನ ಸೇನೆಗೆ ನೀಡಿದ್ದೇನೆ ಎಂದು ಪ್ರಸಾದ್ ಹೇಳಿದ್ದಾರೆ.
ಇದೇ ವಿಚಾರವಾಗಿ ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಸಿಬಿಆರ್ ಪ್ರಸಾದ್ ಅವರು, 1.08 ಕೋಟಿ ರೂಪಾಯಿಯ ಚೆಕ್ ನೀಡಿ ಇದು ನನ್ನ ಪುಟ್ಟ ಕಾಣಿಕೆ ಎಂದು ಹೇಳಿದ್ದಾರೆ.
ಇನ್ನು ಈ ದೇಣಿಗೆ ವಿಚಾರವಾಗಿ ನಿಮ್ಮ ಮಕ್ಕಳಿಗೆ ತಕರಾರು ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪ್ರಸಾದ್ ಅವರು, ದೇಣಿಗೆ ವಿಚಾರವಾಗಿ ನನ್ನ ಪುತ್ರಿಯರೂ ಕೂಡ ಸಂತೋಷಗೊಂಡಿದ್ದಾರೆ. ನನ್ನ ಆಸ್ತಿಯಲ್ಲಿ ಶೇ.2ರಷ್ಟು ಪ್ರಮಾಣವನ್ನು ನನ್ನ ಪುತ್ರಿಯರಿಗೆ ನೀಡಿದ್ದು, ಶೇ.1ರಷ್ಟನ್ನು ನನ್ನ ಪತ್ನಿಗೆ ನೀಡಿದ್ದೇನೆ. ಉಳಿದ ಶೇ.97ರಷ್ಟು ಆಸ್ತಿಯನ್ನು ಸಮಾಜ ಕಾರ್ಯಗಳಿಗೆ ಮೀಸಲಿರಿಸಿದ್ದೇನೆ ಎಂದು ಪ್ರಸಾದ್ ಹೇಳಿದ್ದಾರೆ.
ದೇಣಿಗೆ ಐಡಿಯಾ ಬಂದಿದ್ದು ಹೇಗೆ..?
ಇನ್ನು ದೇಶದ ಸೇನೆಗೆ ದೇಣಿಗೆ ನೀಡುವ ನಿರ್ಧಾರದ ಕುರಿತು ಮಾತನಾಡಿದ ಪ್ರಸಾದ್ ಅವರು, ನಾನು ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನನ್ನ ವಯಸ್ಸು 20 ವರ್ಷ. ಆಗ ಕೊಯಮತ್ತೂರು ಮೂಲದ ಜಿಡಿ ನಾಯ್ಜು ಎಂಬ ನಮ್ಮ ಹಿರಿಯ ಅಧಿಕಾರಿಯೊಬ್ಬರು, ಭಾರತ ಅತ್ಯುತ್ತಮ ದೇಶ. ನಮಗೆ ಎಲ್ಲವನ್ನೂ ನೀಡಿದ ದೇಶಕ್ಕಾಗಿ ನಾವು ಏನನ್ನಾದಾರೂ ಮರಳಿ ನೀಡಬೇಕು. ಸಮಾಜಕ್ಕೆ ನಮ್ಮ ಕೈಲಾದಷ್ಟರ ಮಟ್ಟಿಗೆ ಸೇವೆ ಮಾಡಬೇಕು. ನೀನು ಬರುವಾಗ ಏನನ್ನೂ ತಂದಿರಲಿಲ್ಲ. ಹಾಗೆಯೇ ಹೋಗುವಾಗ ಏನನ್ನೂ ಕೊಂಡಯ್ಯಲಾರೆ. ನೀನು ಸಂಪಾದಿಸಿದ್ದು ಇಲ್ಲೇ.. ಇಲ್ಲಿಯೇ ನಿನ್ನ ಸಂಪಾದನೆ ಉತ್ತಮ ಕೆಲಸಕ್ಕೆ ವ್ಯಯವಾಗಬೇಕು ಎಂದು ಹೇಳಿದ್ದರು. ಆ ಮಾತುಗಳು ನನ್ನ ಮನಸ್ಸಿನಲ್ಲಿ ಉಳಿಯಿತು. ನನ್ನ ಬದುಕಿಗೆ ಬೇಕಾದ ಪ್ರಾಥಮಿಕ ಆದಾಯ ನನಗಿದ್ದು. ಅದನ್ನು ಮೀರಿದ ಹೆಚ್ಚುವರಿ ಹಣವನ್ನು ಸೇನೆಗೆ ನೀಡುತ್ತಿದ್ದೇನೆ ಎಂದು ಪ್ರಸಾದ್ ಹೇಳಿದ್ದಾರೆ.
ಅಂತೆಯೇ ನಾನು ಮನೆ ತೊರೆದಾಗ ನನ್ನ ಜೇಬಿನಲ್ಲಿ ಕೇವಲ 5 ರೂ ಇತ್ತು. ಇದೀಗ 500 ಎಕರೆ ಜಾಗವಿದೆ. ಈ ಪೈಕಿ 5 ಎಕರೆ ಜಾಗವನ್ನು ನನ್ನ ಪತ್ನಿಗೆ ಮತ್ತು 10 ಎಕರೆ ಜಾಗವನ್ನು ನನ್ನ ಮಕ್ಕಳಿಗೆ ನೀಡಿದ್ದೇನೆ. ಬಾಕಿ ಉಳಿದ ಜಾಗವನ್ನು ಸಮಾಜಸೇವೆಗಾಗಿ ಮುಡುಪಾಗಿರಿಸಿದ್ದೇನೆ ಎಂದು ಪ್ರಸಾದ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos