ಅಮರಿಂದರ್ ಸಿಂಗ್ - ನವಜೋತ್ ಸಿಂಗ್ ಸಿಧು
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕೊನೆಗೂ ತಮ್ಮ ಸಂಪುಟದ ಸಚಿವ ನವಜ್ಯೋತ್ ಸಿಂಗ್ ಸಿಧು ಅವರ ರಾಜೀನಾಮೆಯನ್ನು ಶನಿವಾರ ಅಂಗೀಕರಿಸಿದ್ದಾರೆ.
ಸಚಿವ ಸ್ಥಾನಕ್ಕೆ ಸಿಧು ನೀಡಿದ್ದ ಒಂದು ಸಾಲಿನ ರಾಜೀನಾಮೆಯನ್ನು ಇಂದು ಅಂಗೀಕರಿಸಿದ ಸಿಎಂ ಅಮರಿಂದರ್ ಅವರು, ಅದನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಸಿಎಂ ವಿರುದ್ಧ ಹಲವು ತಿಂಗಳುಗಳಿಂದ ಸಂಘರ್ಷಕ್ಕಿಳಿದಿದ್ದ ನವಜೋತ್ ಸಿಂಗ್ ಸಿಧು ಅವರು ಕೊನೆಗೂ ಅಮರೀಂದರ್ ಸಿಂಗ್ ಸಂಪುಟದಿಂದ ಹೊರ ಬಿದ್ದಿದ್ದಾರೆ.
ಜೂನ್ 6 ರಂದು ರಾಜ್ಯ ಕ್ಯಾಬಿನೆಟ್ ಪುನರ್ರಚನೆಯ ನಂತರ ನವಜೋತ್ ಸಿಂಗ್ ಸಿಧು ಅವರನ್ನು ಪ್ರವಾಸೋದ್ಯಮ ಮತ್ತು ಸಂಸ್ಕೃತಿಕ ವ್ಯವಹಾರಗಳ ಖಾತೆಯಿಂದ ಇಂಧನ ಖಾತೆಗೆ ಎತ್ತಂಗಡಿ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಜೀನಾಮೆ ಪತ್ರವನ್ನು ನೇರವಾಗಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡುವ ಮೂಲಕ ಸಿಎಂ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಬಳಿಕ ಸಿಎಂ ಅಮರಿಂದರ್ ಸಿಂಗ್ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರ ನೀಡಿದ್ದರು.
ಸಿಧು ಅವರು 2017ರಲ್ಲಿ ಕಾಂಗ್ರೆಸ್ ಸೇರಿದ ದಿನದಿಂದಲೂ ಅಮರಿಂದರ್ ಸಿಂಗ್ ಜತೆ ಭಿನ್ನಾಭಿಪ್ರಾಯ ಹೊಂದಿದ್ದರು. ಕಾಂಗ್ರೆಸ್ ಹೈಕಮಾಂಡ್ ಭಿನ್ನಾಭಿಪ್ರಾಯ ಶಮನಗೊಳಿಸುವ ಯತ್ನ ಮಾಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics