ದೇಶ

ಶೀಲಾ ದೀಕ್ಷಿತ್ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿ ಹಲವು ಗಣ್ಯರ ಸಂತಾಪ

Lingaraj Badiger
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮೂರು ಬಾರಿ ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ನಿರ್ಗಮಿತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೆಹಲಿ ಮಾಜಿ ಸಿಎಂ ನಿಧನಕ್ಕೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಹಾಗೂ ಬಾಲಿವಡ್ ನಟ ಅಕ್ಷಯ್‌ ಕುಮಾರ್‌ ಸಹ ಕಂಬನಿ ಮಿಡಿದಿದ್ದಾರೆ.
ದೆಹಲಿಯ ಸರ್ವಾಂಗೀಣ ಅಭಿವೃದ್ಧಿಗೆ ಶೀಲಾ ದೀಕ್ಷಿತ್‌ ಅವರ ಪಾತ್ರ ಹಿರಿದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ದುಃಖ ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. 
ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಕಾಂಗ್ರೆಸ್ ಪಕ್ಷದ ಪ್ರೀತಿಯ ಪುತ್ರಿ ಅವರ ಅಗಲಿಕೆ ಸಹಿಸಲಾಗದ ನೋವನ್ನು ತಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ನನಗೆ ಅತ್ಯಂತ ಆಪ್ತರಾಗಿದ್ದ ಶೀಲಾ ದೀಕ್ಷಿತ್ ಸಾವಿನ ಸುದ್ದಿ ಆಘಾತವನ್ನುಂಟು ಮಾಡಿದೆ. ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನಾಗರಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಸಿಗಲಿ” ಎಂದು ಟ್ವಿಟರ್ ಮೂಲಕ ರಾಹುಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಶೀಲಾ ದೀಕ್ಷಿತ್ ಅವರು ರಾಹುಲ್ ಗಾಂಧಿ ಮಾತ್ರವಲ್ಲದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಅತ್ಯಾಪ್ತರೆನಿಸಿದ್ದರು.
ನೂತನ ಸಂಸದ ಗೌತಮ್‌ ಗಂಭೀರ್‌, ಬಿಜೆಪಿ ದಿಲ್ಲಿ ಅಧ್ಯಕ್ಷ ಮನೋಜ್‌ ತಿವಾರಿ, ಕೇಂದ್ರ ಗೃಹಸಚಿವ ರಾಜ್‌ನಾಥ್‌ ಸಿಂಗ್‌, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ  ಅವರು ಟ್ವೀಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
SCROLL FOR NEXT