ಕಾರ್ಗಿಲ್ ವಿಜಯೋತ್ಸವ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಗಿಲ್ ಭೇಟಿ, ಎರಡು ಸೇತುವೆಗಳ ಲೋಕಾರ್ಪಣೆ
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಆಪರೇಷನ್ ವಿಜಯ್ 20 ನೇ ವಾರ್ಷಿಕೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಸಿಂಗ್ ಕಾರ್ಗಿಲ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ 1999 ರಲ್ಲಿ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನದ ನಿಯಮಿತ ಪಡೆಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿದ ಯೋಧರಿಗೆ ನಮಿಸಿದ್ದಾರೆ.
ಇದೇ ವೇಳೆ ಅಲ್ಲಿನ ಪರ್ವತಗಳಿಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳನ್ನು ರಕ್ಷಣಾ ಸಚಿವರು ಉದ್ಘಾಟಿಸಲಿದ್ದಾರೆ.ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಥುವಾ ಜಿಲ್ಲೆಯ ಉಝ್ ಹಾಗೂ ಸಂಬ ಜಿಲ್ಲೆಯ ಬಸಂತರ್‍ನಲ್ಲಿ ನಿರ್ಮಾಣವಾಗಿರುವ ಎರಡು ಸೇತುವೆಗಳನ್ನು ಸಿಂಗ್ ದೇಶಕ್ಕೆ ಸಮರ್ಪಿಸುವವರಿದ್ದಾರೆ. ಇದರಲ್ಲಿ . ಉಝ್ ಸೇತುವೆ ಒಂದು ಕಿಲೋಮೀಟರ್ ಉದ್ದ ಮತ್ತು ಬಸಂತರ್ ಸೇತುವೆ 617.4 ಮೀಟರ್ ಉದ್ದವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
1999ರಲ್ಲಿ ಸುಮಾರು ಎಪ್ಪತ್ತೈದು ದಿನಗಳ ಕಾಲ ನಡೆದಿದ್ದ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ಪಡೆಗಳು ಪಾಕ್ ಸೇನಾಪಡೆ ಹಾಗೂ ಉಗ್ರವಾದಿಗಳ ವಿರುದ್ಧ ವೀರೋಚಿತ ಜಯ ಸಾಧಿಸಿದ್ದವು.
ಭಾರತದ ವಿಜಯದ ನೆನಪಿಗಾಗಿ, ಜುಲೈ 14 ರಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಾಜನಾಥ್ ಸಿಂಗ್ ಅವರು 'ವಿಕ್ಟರಿ ಫ್ಲೇಮ್' ಅನ್ನು ಬೆಳಗಿಸಿದರು. ಜುಲೈ 26 ರಂದು ದ್ರಾಸ್ ತಲುಪಲಿರುವ ಈ ಜ್ಯೋತಿಯು ಒಂಬತ್ತು ಪಟ್ಟಣಗಳು ಮತ್ತು ನಗರಗಳ ಮೂಲಕ ಸಂಚರಿಸಲಿದೆ. ನಂತರ ಇದನ್ನು ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಶಾಶ್ವತ ಜ್ಯೋತಿಯೊಡನೆ ವಿಲೀನಗೊಳಿಸಲಾಗುತ್ತದೆ.ಆಪರೇಷನ್ ವಿಜಯ್ನಲ್ಲಿ ಭಾಗವಹಿಸಿದ ಎಲ್ಲಾ ಸೈನಿಕರ ಹೆಮ್ಮೆ ಮತ್ತು ಶೌರ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಭಾರತೀಯ ಸೇನೆಯು ದೊಡ್ಡ ಸಂಭ್ರಮದಿಂದ ಆಚರಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos