ದೇಶ

ಮೋದಿ 2.0 ಸರ್ಕಾರದ ಮೊದಲ 50 ದಿನಗಳಲ್ಲಿ ಸಮಾಜದ ಎಲ್ಲಾ ರಂಗಗಳ ಅಭಿವೃದ್ದಿಗೆ ಆದ್ಯತೆ: ಜಾವಡೇಕರ್

Nagaraja AB
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೊದಲ 50 ದಿನಗಳಲ್ಲಿ ಸಬ್ ಕಾ ಸಾಥ್ , ಸಬ್ ಕಾ ವಿಕಾಸ್, ಸಬ್ ಕ ವಿಶ್ವಾಸ್ ಘೋಷಣೆಯ ಜಾರಿಗೆ ಹೆಚ್ಚಿನ ಗಮನ ಹರಿಸಿದ್ದು, ಮೂಲಸೌಕರ್ಯ, ಶಿಕ್ಷಣ ಮತ್ತು ಸಮಾಜದ ಎಲ್ಲಾ ರಂಗಗಳಲ್ಲಿ ತೀವ್ರಗತಿಯ ಅಭಿವೃದ್ಧಿ ಸಾಧಿಸಲು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಕೇಂದ್ರ ಸರ್ಕಾರ ಇಂದು ಹೇಳಿದೆ.
50 ದಿನಗಳಲ್ಲಿ ಮೂಲಸೌಕರ್ಯ, ಶಿಕ್ಷಣ, ರೈತರು ,ನಿರುದ್ಯೋಗಿ ಯುವಕರು, ಮಧ್ಯಮ ವರ್ಗ, ವ್ಯಾಪಾರಿಗಳು, ಮತ್ತು ಸಮಾಜದ ಎಲ್ಲಾ ವರ್ಗದವರ ಅಭಿವೃದ್ಧಿಗೆ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಎರಡನೇ ಅವಧಿಯ ಸರ್ಕಾರದ  50 ದಿನಗಳ ಸಾಧನಾ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೋದಿ ಸರ್ಕಾರ ಪಿಎಂ- ಕಿಸಾನ್ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ದೇಶದ ಎಲ್ಲಾ ರೈತರಿಗೆ ವಿಸ್ತರಿಸಿದೆ. ಬೆಳೆ ವೆಚ್ಚದ 2-3 ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯನ್ನು ನೀಡಲಾಗುತ್ತಿದೆ ಎಂದರು.
ವೇತನ, ಸಾಮಾಜಿಕ ಭದ್ರತೆ , ಕೈಗಾರಿಕಾ ಸುರಕ್ಷತೆ ಮತ್ತು ಕಲ್ಯಾಣ, ಕೈಗಾರಿಕಾ ಸಂಬಂಧಗಳನ್ನು ನಿಭಾಯಿಸುವ ನಾಲ್ಕು ಕಾನೂನುಗಳ ಅಡಿಯಲ್ಲಿ ಎಲ್ಲಾ ಕಾನೂನುಗಳನ್ನು ವಿಲೀನಗೊಳಿಸುವ ಮೂಲಕ ಹೊಸ ಕಾರ್ಮಿಕ ಶಾಸನವನ್ನು  ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಸರ್ಕಾರವು ತನ್ನ ಎರಡನೇ ಅಧಿಕಾರವಧಿಯ ಮೊದಲ ನಿರ್ಧಾರದಲ್ಲಿ ಪ್ರಧಾನಮಂತ್ರಿಗಳ ವಿದ್ಯಾರ್ಥಿ  ವೇತನ ಯೋಜನೆಯ ಭಾಗವಾಗಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚಿಸಿದೆ. ಭಯೋತ್ಪಾದಕ ಅಥವಾ ಮಾವೋವಾದಿ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ವ್ಯಾಪಾರಿಗಳಿಗೂ ಪಿಂಚಣಿ ಸೌಲಭ್ಯವನ್ನು ಆರಂಭಿಸಲಾಗುತ್ತಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಮನೆಗಳನ್ನು ಒದಗಿಸಿಕೊಡಲು ಕಡಿಮೆ ಬಡ್ಡಿಯ ಸಾಲ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ. 2024ರ ವೇಳೆಗೆ ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ನಾಗರಿಕರಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವ ಕ್ಷೇತ್ರಗಳಿಗೆ ಸರಿಯಾದ ಮಾರ್ಗಸೂಚಿಯನ್ನು ತಯಾರಿಸಿದೆ ಎಂದು ಹೇಳಿದರು.
ಮೂಲಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂಪಾಯಿ ನೆರವು, ಮೂರನೇ ಹಂತದ ಗ್ರಾಮೀಣ ಸಡಕ್ ಯೋಜನೆ ಮತ್ತು ಮುಚ್ಚಿದ ಬಾಟಲಿಯಲ್ಲಿ ಕುಡಿಯುವ ನೀರನ್ನು ಒದಗಿಸಲು ನೀರಿನ ನಿರ್ವಹಣೆ ಮುಂತಾದವು ದೇಶಕ್ಕಾಗಿ ಸರ್ಕಾರ ರೂಪಿಸಿರುವ ಕೆಲವು ಯೋಜನೆಗಳಾಗಿವೆ, ಶಿಕ್ಷಣ, ಮಕ್ಕಳ ಮೇಲಿನ ದೌರ್ಜನ್ಯ, ಬಾಡಿಗೆ ತಾಯಂದಿರ ಮತ್ತು ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ  ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದರು.
SCROLL FOR NEXT