ರಾಜಕೀಯ ಅನಿಶ್ಚಿತತೆ ಮುಂದುವರೆದರೆ ರಾಷ್ಟ್ರಪತಿ ಆಡಳಿತ ಜಾರಿ ಅನಿವಾರ್ಯವಾಗಬಹುದು: ರಮೇಶ್ ಕುಮಾರ್
ಬೆಂಗಳೂರು: ರಾಜ್ಯದಲ್ಲಿ ಈ ತಿಂಗಳಾಂತ್ಯದವರೆಗೆ ರಾಜಕೀಯ ಅನಿಶ್ಚಿತತೆ ಮುಂದುವರೆದರೆ ರಾಷ್ಟ್ರಪತಿ ಆಡಳಿತ ಜಾರಿ ಅನಿವಾರ್ಯವಾಗಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರೆದಿದೆ. ಈ ತಿಂಗಳ 31ರ ಒಳಗಾಗಿ ಧನ ವಿನಿಯೋಗ ವಿಧೇಯಕಗಳಿಗೆ ವಿಧಾನಮಂಡಲದ ಅನುಮೋದನೆ ದೊರೆಯಬೇಕು. ಇಲ್ಲವಾದಲ್ಲಿ ಸಹಜವಾಗಿಯೇ ಸಾಂವಿಧಾನಿಕ ಬಿಕ್ಕಟ್ಟು ತಲೆ ದೋರಲಿದೆ ಎಂದರು.
ಧನ ವಿನಿಯೋಗಕ್ಕೆ ಅನುಮೋದನೆ ದೊರೆಯದಿದ್ದರೆ ಆಡಳಿತ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸರ್ಕಾರಿ ನೌಕರರಿಗೆ ಸಂಬಳ ದೊರೆಯುವುದಿಲ್ಲ. ಖರ್ಚು ವೆಚ್ಚಗಳಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಹಣವಿಲ್ಲದೇ ಎಲ್ಲಾ ಯೋಜನೆಗಳು ಸ್ಥಗಿತಗೊಳ್ಳುತ್ತವೆ. ರಾಜ್ಯದಲ್ಲಿ ಇಂತಹ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದೆ ಯಾರು ಸರ್ಕಾರ ರಚಿಸುತ್ತಾರೋ ಅವರು ತಕ್ಷಣ ವಿಧಾನಮಂಡಲ ಅಧಿವೇಶನ ಕರೆದು ಕೂಡಲೇ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆಯಬೇಕು. ಜುಲೈ ಅಂತ್ಯದವರೆಗೆ ಮಾತ್ರ ಲೇಖಾನುದಾನಕ್ಕೆ ಅನುಮತಿ ಪಡೆಯಲಾಗಿದ್ದು, ಈಗ ವಿಧಾನಮಂಡಲದ ಅನಮೋದನೆ ಪಡೆಯದಿದ್ದರೆ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ವಿಚಾರದಲ್ಲಿ ಸಭಾಧ್ಯಕ್ಷರ ಪೀಠ ನೀಡುವ ತೀರ್ಪಿನ ಬಗ್ಗೆ ಗಮನ ಸೆಳೆದಾಗ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ತಮಗೆ ವಿವೇಚನೆ ಇದೆ. ಜತೆಗೆ ಸುಪ್ರೀಂ ಕೊರ್ಟ್ ವಿಶ್ವಾಸವನ್ನು ಸಹ ಉಳಿಸಿಕೊಳ್ಳುತ್ತೇನೆ ಎಂದು ಮುಗುಮ್ಮಾಗಿಯೇ ಹೇಳಿದರು.
ಶಾಸಕರು ರಾಜಿನಾಮೆ ನೀಡಿದಾಗ ಸಂವಿಧಾನದ 190ರ ಪ್ರಕಾರ ವಿಚಾರಣೆಗೆ ಬರಬೇಕೆಂದು ನೋಟಿಸ್ ನೀಡಲಾಗಿತ್ತು. ಆದರೆ ಅವರು ಬರಲಿಲ್ಲ. ರಾಜೀನಾಮೆ ನೀಡಿರುವ ಶಾಸಕರನ್ನು ಕರೆಸಿ ವಿಚಾರಣೆ ಮಾಡುವುದು ಪದ್ಧತಿ. ಅದರಂತೆ ಆಹ್ವಾನ ಕೊಟ್ಟಿದ್ದೇನೆ. ಮತ್ತೆ, ಮತ್ತೆ ಅವರಿಗೆ ನೋಟಿಸ್ ಕೊಡಲು ತಮಗೆ ಬೇರೆ ಕೆಲಸ ಇಲ್ಲವೆ. ಒಮ್ಮೆ ನೋಟಿಸ್ ಕೊಡಲಾಗಿದ್ದು, ಅಲ್ಲಿಗೆ ಆ ವಿಚಾರ ಮುಗಿದಂತೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos