ದೇಶ

ಅಮೇಥಿ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣ: ಐದು ಆರೋಪಿಗಳ ಬಂಧನ, ಆರೋಪಿ ಕಾಲಿಗೆ ಗುಂಡು

Srinivasamurthy VN
ಅಮೇಥಿ: ಲೋಕಸಭಾ ಚುನಾವಣೆ ಬೆನ್ನಲ್ಲೇ ಅಮೇಥಿಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಒಟ್ಟು ಐದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ ಕೊಲೆ ಪ್ರಕರಣದ ಐದನೇ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ಪರಿಣಾಮ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದು,  ಐದನೆ ಆರೋಪಿಗಾಗಿ ಶೋಧ ನಡೆಸಿದ್ದರು. 
ನಿನ್ನೆ ಆರೋಪಿ ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತ ಅಡಗಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆತ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಎನ್ನಲಾಗಿದೆ. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸ್ ಇನ್ಸ್ ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡ ಆತ ಕುಸಿದ ಪರಿಣಾಮ ಆತನನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಆತ ಚಿಕಿತ್ಸೆಪಡೆಯುತ್ತಿದ್ದು, ಚೇತರಿಸಿಕೊಂಡ ಬಳಿಕ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಘಟನೆಯಲ್ಲಿ ಇನ್ಸ್ ಪೆಕ್ಟರ್ ಕೂಡ ಗಾಯಗೊಂಡಿದ್ದುಸ ಅವರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಈ ಬಗ್ಗೆ ಮಾಹಿತಿ ನೀಡಿದ ಅಮೇಥಿ ಎಸ್ ಪಿ ರಾಜೇಶ್ ಕುಮಾರ್ ಅವರು, ಕೊಲೆ ಪ್ರಕರಣದಲ್ಲಿ ಈತನೇ ಐದನೆ ಆರೋಪಿ ಹಾಗೂ ಕಡೆಯ ಆರೋಪಿಯನ್ನು ಈಗ ವಶಕ್ಕೆ ಪಡೆಯಲಾಗಿದೆ. ಆರೋಪಿಯ ಕಾಲಿಗೆ ಗಾಯಗಳಾಗಿವೆ. ಚಿಕಿತ್ಸೆ ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು  ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಸಮಯದಲ್ಲಿ ಆರಂಭವಾದ ದ್ವೇಷದಿಂದಾಗಿ ಐದು ಮಂದಿ ಆರೋಪಿಗಳು ಸುರೇಂದ್ರ ಸಿಂಗ್ ನನ್ನು ಕೊಲೆ ಮಾಡಿದ್ದರು. ಸಚಿವೆ ಸ್ಮೃತಿ ಇರಾನಿಯ ಕಟ್ಟಾ ಬೆಂಬಲಿಗನಾಗಿದ್ದ ಸುರೇಂದ್ರ ಸಿಂಗ್ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಸಿಂಗ್ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಮೃತಿ ಇರಾನಿ ಅವರು ಆತನ ಮನೆಗೆ ಹೋಗಿ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಪಾಲ್ಗೊಂಡು, ಅಂತ್ಯ ಕ್ರಿಯೆಯಲ್ಲಿ ಖುದ್ಧು ಭಾಗಿಯಾಗಿದ್ದರು.
SCROLL FOR NEXT