ದೇಶ

ಮುಂದಿನ 5 ವರ್ಷಗಳಲ್ಲಿ ರಾಮಮಂದಿರ ನಿರ್ಮಾಣ ನಿಶ್ಚಿತ: ಪೇಜಾವರ ಶ್ರೀ ವಿಶ್ವಾಸ

Srinivasamurthy VN
ಬಳ್ಳಾರಿ: ಮುಂದಿನ ಐದು ವರ್ಷಗಳಲ್ಲಿ ಖಂಡಿತಾ ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ಪೇಜಾವರ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಗುವುದು ನಿಶ್ಚಿತ ಎಂದು ವಿಶ್ವ ಹಿಂದೂ ಪರಿಷತ್ ಹಿರಿಯ ಮುಖಂಡ ಹಾಗೂ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. 
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ರಾಜ್ಯಸಭೆಯಲ್ಲೂ ಪೂರ್ಣ ಬಹುಮತ ಸಿಗುತ್ತದೆ. ಹೀಗಾಗಿ ಮಂದಿರ ನಿರ್ಮಾಣಕ್ಕೆ ಯಾವುದೇ ಅಡ್ಡಿಯಿಲ್ಲ ಎಂದರು. ಅಂತೆಯೇ ಮಂದಿರ ನಿರ್ಮಾಣದ ವಿವಾದ ಪ್ರಸ್ತುತ ಸುಪ್ರೀಂಕೋರ್ಟ್ ಅಂಗಳದಲ್ಲಿರುವ ಬಗ್ಗೆ ಪ್ರಸ್ತಾಪಿಸಿದ ಶ್ರೀಗಳು, “ನ್ಯಾಯಾಲಯದ ತೀರ್ಪು ರಾಮಮಂದಿರ ನಿರ್ಮಾಣದ ಪರವಾಗಿರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲದ ಕುರಿತು ಬೇಸರ ವ್ಯಕ್ತಪಡಿಸಿದ ಪೇಜಾವರ ಶ್ರೀ, ಮೂರೂ ಪಕ್ಷಗಳು ಒಗ್ಗೂಡಿ ಉತ್ತಮ ಆಡಳಿತ ನೀಡಬೇಕು. ಬಿಜೆಪಿ ಜಾತ್ಯತೀತ ಪಕ್ಷವಲ್ಲ ಎಂದು ಕರೆಯುವುದು ಸರಿಯಲ್ಲ. ಜನಹಿತಕ್ಕಾಗಿ ಸರ್ಕಾರ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಪಶ್ಚಿಮ ಬಂಗಾಳ ಸರ್ಕಾರದ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಸಹಕರಿಸುತ್ತಿದ್ದಾರೆ ಎಂದು ಟೀಕಿಸಿದರು.
SCROLL FOR NEXT