ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೆರವಣಿಗೆಗೆ ತಡೆ: ಪ್ರಕ್ಷುಬ್ಧ ಪರಿಸ್ಥಿತಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೆರವಣಿಗೆಗೆ ತಡೆಯೊಡ್ಡಲಾಗಿದ್ದು, ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.
ಪಕ್ಷದ ಮೃತ ಕಾರ್ಯಕರ್ತರ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಸಾಗುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ತಡೆ ಹಿಡಿದಿದ್ದಾರೆ. ಈ ಪೈಕಿ ಬಿಜೆಪಿ ಸಂಸದ ದಿಲೀಪ್ ಘೋಷ್, ಹೂಗ್ಲಿ ಸಂಸದ ಲಾಕೆಟ್ ಚಟರ್ಜಿ, ರಾಹುಲ್ ಸಿನ್ಹಾ ಹಾಗೂ ಇತರರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಬಿಜೆಪಿಯ ಮೃತ ಕಾರ್ಯಕರ್ತರ ಪಾರ್ಥಿವ ಶರೀರವನ್ನು ಕೋಲ್ಕತ್ತಾದಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಕೊಂಡೊಯ್ದು ಅಂತಿಮ ನಮನ ಸಲ್ಲಿಸಬೇಕಿತ್ತು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದೇ ಕೋಲ್ಕತ್ತಾಗೆ ಬಿಜೆಪಿ ಕಾರ್ಯಕರ್ತರ ಪಾರ್ಥಿವ ಶರೀರ ಹೊತ್ತಿದ್ದ ವಾಹನಕ್ಕೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ.
ಪೊಲೀಸರು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯ ಕಾರಣ ನೀಡಿದ್ದು, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಈಗ 12 ಗಂಟೆಗಳ ಕಾಲ ಬಸಿರ್ಹಾಟ್ ಬಂದ್ ಗೆ ಕರೆ ನೀಡಿದೆ. ಜೂನ್08 ರಂದು ಪಶ್ಚಿಮ ಬಂಗಾಳದ 24 ನಾರ್ತ್ ಪರ್ಗರ್ನಾಸ್ ಜಿಲ್ಲೆಯಲ್ಲಿ ಬಿಜೆಪಿಯ 8 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಸಹ ಆತಂಕ ವ್ಯಕ್ತಪಡಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos