ದೇಶ

ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ: ಆರೋಪಿ ವಿಶಾಲ್ ಖುಲಾಸೆಗೆ ವಿಷಾದ ವ್ಯಕ್ತಪಡಿಸಿದ ತನಿಖಾಧಿಕಾರಿ

Lingaraj Badiger
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಸಾಂಜಿ ರಾಮ್ ಮನೆಗೆ ಬೆಳಗಿನ ಜಾವ ತೆರಳಿದಾಗ ನಡುಗುವ ಚಳಿಯಲ್ಲೂ ಆತನ ಮುಖದ ಮೇಲೆ ಬೆವರು ಬಂದಿತ್ತು ಮತ್ತು ಆತ ಏನೋ ಮರೆ ಮಾಚುತ್ತಿದ್ದಾರೆ ಎಂಬ ಅನುಮಾನ ಬಂದಿತ್ತು ಎಂದು ಪ್ರಕರಣ ಮುಖ್ಯ ತನಿಖಾ ಅಧಿಕಾರಿಯಾಗಿದ್ದ ಆರ್ ಕೆ ಜಲ್ಲಾ ಅವರು ನೆನಪಿಸಿಕೊಂಡಿದ್ದಾರೆ.
ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಸಾಂಜಿ ರಾಮ್ ಹಾಗೂ ಇತರೆ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಈ ಪ್ರಕರಣದ ತನಿಖೆ ನಡೆಸಿದ ಜಲ್ಲಾ ಅವರು ಮೂರು ತಿಂಗಳ ಹಿಂದಷ್ಟೇ ಸೇವೆಯಿಂದ ನಿವೃತ್ತಿಯಾಗಿದ್ದಾರೆ.
ಆರೋಪಿಗಳಿಗೆ ಶಿಕ್ಷೆಯಾದ ನಂತರ, ತನಿಖೆಯ ವೇಳೆ ತಾವು ಎದುರಿಸಿದ ಸವಾಲುಗಳನ್ನು ಪಿಟಿಐಗೆ ವಿವರಿಸಿದ ಜಲ್ಲಾ ಅವರು, ಅಪರಾಧ ನಡೆದ ಸ್ಥಳ ಪರಿಶೀಲಿಸಿದ ನಂತರ ನಾವು ನೇರವಾಗಿ ಸಾಂಜಿ ರಾಮ್ ಮನೆಗೆ ಹೋದೆವು. ನಾನು ಮತ್ತು ನನ್ನ ತಂಡ ಸಾಂಜಿ ರಾಮ್ ಹಾಗೂ ಆತನ ಕುಟುಂಬದ ವಿಚಾರಣೆ ನಡೆಸಲು ಆರಂಭಿಸಿದೆವು. ಈ ವೇಳೆ ಆತನ ಪುತ್ರ ವಿಶಾಲ್ ಬಗ್ಗೆ ವಿಚಾರಿಸಿದಾಗ ಸಾಂಜಿ ರಾಮ್ ಏರಿದ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು. ಅಲ್ಲದೆ ನನ್ನ ಮಗ ಮೀರತ್ ನಲ್ಲಿ ಓದುತ್ತಿದ್ದು, ನೀವು ಹೋಗಿ ಪರಿಶೀಲಿಸಬಹುದು ಮತ್ತು ಆತನ ಕಾಲ್ ರೆಕಾರ್ಡ್ ಪರಿಶೀಲಿಸಬಹುದು ಎಂದರು. ಹಾಗ ನನಗೆ ಎರಡು ವಿಚಾರಗಳ ಬಗ್ಗೆ ಅಚ್ಚರಿಯಾಯಿತು. ಒಂದು ಅವರು ಏಕೆ ನನಗೆ ಹೋಗಿ ಪರಿಶೀಲಿಸಿ ಮತ್ತು ಫೋನ್ ಕಾಲ್ ಚೆಕ್ ಮಾಡಿ ಎಂದು ಹೇಳುತ್ತಿದ್ದಾರೆ ಮತ್ತು ಚಳಿಯಲ್ಲೂ ಅವರು ಬೆವರುತ್ತಿರುವುದು ಏಕೆ ಎಂಬ ಪ್ರಶ್ನೆ ಕಾಡತೊಡಗಿತು ಎಂದು 60 ವರ್ಷದ ಜಲ್ಲಾ ತಿಳಿಸಿದ್ದಾರೆ.
ಸಾಕ್ಷ್ಯಾಧಾರಗಳ ಕೊರೆತೆ ಹಿನ್ನೆಲೆಯಲ್ಲಿ ಕೋರ್ಟ್ ವಿಶಾಲ್ ನನ್ನು ಖುಲಾಸೆಗೊಳಿಸಿದೆ. ಆದರೆ ಈ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಜಲ್ಲಾ ಅವರು, ವಿಶಾಲ್ ಖುಲಾಸೆಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವ ವಿಶ್ವಾಸವಿದೆ ಎಂದಿದ್ದಾರೆ.
ಸಾಂಜಿ ರಾಮ್ ಅವರು ಈ ಪ್ರಕರಣದಲ್ಲಿ ಪುತ್ರನನ್ನು ರಕ್ಷಿಸಲು ಎಲ್ಲಾ ರೀತಿಯ ಯತ್ನಗಳನ್ನು ಮಾಡಿದ್ದಾರೆ. ಆದರೆ ಆತನ ವಿರುದ್ಧ ಕ್ರೈಂ ಬ್ರಾಂಚ್ ಸಂಗ್ರಹಿಸಿರುವ ಎಲ್ಲಾ ಸಾಕ್ಷ್ಯಗಳನ್ನು ಹೈಕೋರ್ಟ್ ಗುರುತಿಸುವ ವಿಶ್ವಾಸವಿದೆ ಎಂದು ಜಲ್ಲಾ ಹೇಳಿದ್ದಾರೆ.
ನಿನ್ನೆಯಷ್ಟೇ ಪಠಾಣ್​ಕೋಟ್​ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರ ಸಾಂಜಿ ರಾಮ್​ ಸೇರಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ಮೂವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಮತ್ತೊಬ್ಬ ಆರೋಪಿ ವಿಶಾಲ್ ನನ್ನು ಖುಲಾಸೆಗೊಳಿಸಿತ್ತು.
SCROLL FOR NEXT