ಜೆಟ್ ಏರ್ ವೇಸ್ ವಿಮಾನಕ್ಕೆ ಹುಸಿ ಅಪಹರಣ ಬೆದರಿಕೆ: ಮುಂಬೈ ಉದ್ಯಮಿಗೆ ಜೀವಾವಧಿ ಶಿಕ್ಷೆ, 5 ಕೋಟಿ ರೂ. ದಂಡ
ಅಹ್ಮದಾಬಾದ್: ವಿಮಾನ ಅಪಹರಣ ತಡೆ ತಿದ್ದುಪಡಿ ಕಾಯ್ದೆ-2016ರ ಅಡಿ ಮೊದಲ ಪ್ರಕರಣ ಹಾಗೂ ಶಿಕ್ಷೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ನ ವಿಶೇಷ ನ್ಯಾಯಾಲಯ ಮಂಗಳವಾರ ಮುಂಬೈ ಮೂಲದ ಉದ್ಯಮಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2017ರ ಅಕ್ಟೋಬರ್ 30ರಂದು ಜೆಟ್ ಏರ್ ವೇಸ್‍ನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷೆಗೆ ಒಳಗಾದ ಉದ್ಯಮಿ ‘ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯಲಾಗುವುದು. ವಿಮಾನದಲ್ಲಿ ಅಪಹರಣಕಾರರು ಮತ್ತು ಸ್ಫೋಟಕಗಳಿವೆ’ ಎಂಬ ನಕಲಿ ಪತ್ರವನ್ನು ಶೌಚಾಲಯದ ಟಿಶ್ಯೂ ಪೇಪರ್ ಬಾಕ್ಸ್ ನಲ್ಲಿ ಹಾಕಿದ್ದ.
ಶಿಕ್ಷೆಗೆ ಒಳಗಾದ ಉದ್ಯಮಿ ಬಿರ್ಜು ಕೆ. ಸಲ್ಲಾಗೆ ಎನ್‍ಐಎ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ.ದವೆ ಅವರು ಜೈಲು ಶಿಕ್ಷೆ ಜೊತೆಗೆ 5 ಕೋಟಿ ರೂ. ದಂಡವನ್ನೂ ವಿಧಿಸಿದ್ದಾರೆ. ಈ ಮೊತ್ತದಲ್ಲಿ ಘಟನೆ ನಡೆದ ವೇಳೆ ವಿಮಾನದಲ್ಲಿದ್ದ ಪೈಲಟ್ ಹಾಗೂ ಸಹ ಪೈಲಟ್‍ಗೆ ತಲಾ ಒಂದು ಲಕ್ಷ ರೂ, ಗಗನ ಸಖಿಯರಿಗೆ ತಲಾ 50,000 ರೂ, ಪ್ರಯಾಣಿಕರಿಗೆ ತಲಾ 25,000 ರೂ. ನೀಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಏಳು ವಿಮಾನ ಸಿಬ್ಬಂದಿ, ಸಲ್ಲಾ ಸೇರಿ 115 ಪ್ರಯಾಣಿಕರಿದ್ದ ಮುಂಬೈ-ದೆಹಲಿ ವಿಮಾನ ಹುಸಿ ಬೆದರಿಕೆಯಿಂದ ಅಹ್ಮದಾಬಾದ್‍ನಲ್ಲಿ ಇಳಿದಿತ್ತು. ಈ ವೇಳೆ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಪ್ರಯಾಣಿಸುತ್ತಿದ್ದ ಸಲ್ಲಾನನ್ನು ಬಂದಿಸಲಾಗಿತ್ತು. ಜೆಟ್ ಏರ್ ವೇಸ್‍ನಲ್ಲಿ ಕೆಲಸ ಮಾಡುತ್ತಿರುವ ತನ್ನ ಮಾಜಿ ಪ್ರಿಯತಮೆಯನ್ನು ಮತ್ತೆ ಒಲಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾಗಿ ಸಲ್ಲಾ ತಪ್ಪೊಪ್ಪಿಕೊಂಡಿದ್ದ. ತನ್ನ ಯೋಜನೆ ಯಶಸ್ವಿಯಾದರೆ, ಜೆಟ್ ಏರ್ ವೇಸ್‍ನ ಸೇವೆಗಳೆಲ್ಲ ಸ್ಥಗಿತಗೊಂಡು ಗೆಳತಿ ತಾನು ಚಿನ್ನಾಭರಣ ವ್ಯಾಪಾರ ನಡೆಸುತ್ತಿರುವ ಮುಂಬೈಗೆ ವಾಪಸ್ಸಾಗುತ್ತಿದ್ದಳು ಎಂದು ಅವನು ಭಾವಿಸಿದ್ದ.