ದೇಶ

'ಹೃದಯಕ್ಕಾಗಿ ಯೋಗ' ಈ ವರ್ಷದ ವಿಶ್ವ ಯೋಗ ದಿನಾಚರಣೆ ಘೋಷ ವಾಕ್ಯ

Nagaraja AB
ನವದೆಹಲಿ: ಹೃದಯಕ್ಕಾಗಿ ಯೋಗ - (ಯೋಗ ಫಾರ್ ಹಾರ್ಟ್) ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಘೋಷ ವಾಕ್ಯವಾಗಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ಯೇಸ್ಸೊ ನಾಯಕ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ಜೂನ್ 21 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯತ್ತ ಇಡೀ ವಿಶ್ವವೇ ಗಮನ ಹರಿಸಿದೆ ಎಂದು ಕೇಂದ್ರ ಆಯುಷ್  ಇಲಾಖೆ ರಾಜ್ಯ ಸಚಿವ ನಾಯಕ್ ತಿಳಿಸಿದ್ದಾರೆ.
ಯೋಗ ಜನರ ಜೀವನಕ್ಕೆ ಅತಿ ಪ್ರಮುಖವಾದ ಅಂಶವಾಗಿದ್ದು, ವಿಶ್ವಕ್ಕೆ ಯೋಗವನ್ನು ಪರಿಚಯಿಸುವ ಮೂಲಕ ಭಾರತ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿಂದು ಹೇಳಿದರು. 
ಜೂನ್ 21 ರಂದು ರಾಂಚಿಯಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಪ್ರಧಾನ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.  ಯೋಗ ಸಂದೇಶವನ್ನು ಪ್ರತಿ ವ್ಯಕ್ತಿ ಹಾಗೂ ಮನೆಗೆ ತಲುಪಿಸಬೇಕೆಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಯೋಗದಿಂದ ಜನರು ಪ್ರಯೋಜನ ಪಡೆಯುವಂತಾಗಲು ಇದನ್ನು ಆಂದೋಲನವನ್ನಾಗಿ  ರೂಪಿಸುವ ನಿಟ್ಟಿನಲ್ಲಿ ಮುಂದಾಗುವ ಶಿಕ್ಷಣ, ಉದ್ಯಮ ಸಂಸ್ಥೆಗಳು ಹಾಗೂ ಸಾಂಸ್ಕೃತಿಕ ಸಂಘಟನೆಗಳನ್ನು ಪ್ರೋತ್ಸಾಹಿಸುವುದಾಗಿ ಅಯುಷ್  ಸಚಿವರು ಹೇಳಿದ್ದಾರೆ.
ಐದು ನಗರ ಪಟ್ಟಿಯಲ್ಲಿ ಅಂತಿಮವಾಗಿ ರಾಂಚಿಯಲ್ಲಿ ಪ್ರಧಾನ ಸಮಾರಂಭ ನಡೆಸಲು ಆಯ್ಕೆ ಮಾಡಲಾಗಿದೆ. ಈ ಹಿಂದಿನ ನಾಲ್ಕು ಕಾರ್ಯಕ್ರಮಗಳಿಗಿಂತ ರಾಂಚಿಯಲ್ಲಿ ನಡೆಯಲಿರುವ ಕಾರ್ಯಕ್ರಮ ಉತ್ತಮವಾಗಲಿದೆ. ಸುಮಾರು 50 ಸಾವಿರ ಯೋಗಾಸಕ್ತರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀಪಾದ್ ಯೇಸ್ಸೊ ನಾಯಕ್  ತಿಳಿಸಿದ್ದಾರೆ.
SCROLL FOR NEXT