ದೇಶ

ವೈದ್ಯರ ರಾಜಿನಾಮೆ ಪರ್ವ, ಕೋರ್ಟ್ ಛಾಟಿ ಬೆನ್ನಲ್ಲೇ ವೈದ್ಯರೊಂದಿಗೆ ಸಂಧಾನಕ್ಕೆ ಮುಂದಾದ ದೀದಿ!

Srinivasamurthy VN
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಕರ ತಾರಕಕ್ಕೇರಿದ ಬೆನ್ನಲ್ಲೇ ಕೊನೆಗೂ ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನಾ ನಿರತ ವೈದ್ಯರೊಂದಿಗೆ ಸಭೆ ನಡೆಸಲು ಅನುಮತಿ ನೀಡಿದ್ದಾರೆ.
ನಿನ್ನೆ ರಾತ್ರಿಯೇ ಮುಷ್ಕರ ನಿರತ ವೈದ್ಯರು ಮಮತಾ ಬ್ಯಾನರ್ಜಿ ಅವರೊಂದಿಗೆ ಚರ್ಚೆಗೆ ಮುಂದಾಗಿದ್ದರು. ಆದರೆ ಮಮತಾ ಬ್ಯಾನರ್ಜಿ ರಾತ್ರಿ ಸಾಧ್ಯವಿಲ್ಲ ಎಂದು ಹೇಳಿ ಇಂದು ಸಂಜೆ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಇನ್ನು ವೈದ್ಯರ ಮುಷ್ಕರದಿಂದಾಗಿ ಬಂಗಾಳದಲ್ಲಿ ಸತತ ನಾಲ್ಕನೇ ದಿನವೂ ಸರ್ಕಾರಿ ಆಸ್ಪತ್ರೆಗಳ ಸೇವೆಯಲ್ಲಿ ವ್ಯತ್ಯವಾಗಿದ್ದು, ಇಂದೂ ಕೂಡ ಸಾವಿರಾರು ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. 
ನಿನ್ನೆಯಷ್ಟೇ ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರತಿಭಟನಾ ನಿರತ ವೈದ್ಯರು, ತಮ್ಮ ಪ್ರತಿಭಟನೆ ಕೈ ಬಿಡಲು ಕೆಲ ಷರತ್ತುಗಳನ್ನು ವಿಧಿಸಿದ್ದರು. ಈ ಷರತ್ತುಗಳ ಪೈಕಿ ಪ್ರಮುಖವಾಗಿ ಎಸ್ಎಸ್ ಕೆಎಂ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ನಡೆದುಕೊಂಡ ರೀತಿಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕಿರಿಯ ವೈದ್ಯರ ವೇದಿಕೆಯ ವಕ್ತಾರ ಡಾ. ಅರಿಂದಾಮ್ ದತ್ತ ಅವರು ಹೇಳಿದ್ದಾರೆ.
ಅಲ್ಲದೆ ಬಳಿಕ ಅವರೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವೈದ್ಯರ ಆರೋಗ್ಯ ವಿಚಾರಿಸಬೇಕು. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ನೀಡಬೇಕು. ವೈದ್ಯರಿಗೆ ರಕ್ಷಣೆ ನೀಡದ ಪೊಲೀಸರ ವಿರುದ್ಧ ನ್ಯಾಯಾಂಗ ತನಿಖೆಗೆ ನಡೆಸಬೇಕು. ಅಲ್ಲದೆ ನಮ್ಮ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಂಡ ಬಗ್ಗೆ ದಾಖಲೆ ನೀಡಬೇಕು ಎಂದು ಹೇಳಿದ್ದಾರೆ.
ಇನ್ನು ಎಸ್ ಎಸ್ ಕೆಎಂ ಆಸ್ಪತ್ರೆಗೆ ಸಿಎಂ ಮಮತಾ ಬ್ಯಾನರ್ಜಿ ಬಂದು ಹೋದ ಬಳಿಕ ಕೆಲ ಹೊರಗಿನ ವ್ಯಕ್ತಿಗಳು ಬಂದು ಗಲಾಟೆ ಮಾಡಲು ಯತ್ನಿಸಿದ್ದರು. ಆದರೆ ಮಮತಾ ವೈದ್ಯರ ಮುಷ್ಕರವನ್ನು ಸಿಪಿಐಎಂ ಮತ್ತು ಬಿಜೆಪಿಯ ರಾಜಕೀಯ ಕುತಂತ್ರ ಎಂದು ಆರೋಪಿಸಿದ್ದರು.
SCROLL FOR NEXT