ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪ್ರಮಾಣ ವಚನ ಸ್ವೀಕಾರಕ್ಕೂ ತಕರಾರು ತೆಗೆದ ವಿಪಕ್ಷಗಳು!
ನವದೆಹಲಿ: 2019 ರ ಲೋಕಸಭಾ ಚುನಾವಣೆ ವೇಳೆ ಅತಿ ಹೆಚ್ಚು ಸುದ್ದಿಯಾಗಿದ್ದ ಅಭ್ಯರ್ಥಿಗಳ ಪೈಕಿ ಭೋಪಾಲ್ ನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕೂಡ ಒಬ್ಬರು.
ಗಾಂಧಿ-ಗೋಡ್ಸೆ ಹೇಳಿಕೆಯಿಂದಾಗಿ ಸ್ವಪಕ್ಷೀಯರು ಹಾಗೂ ವಿಪಕ್ಷದವರಿಂದಲೂ ಭಾರಿ ವಿರೋಧ ಎದುರಿಸಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಈಗ ಭೋಪಾಲ್ ನ ಸಂಸದೆ, ಈಗ ವಿಪಕ್ಷಗಳು ಸಾಧ್ವಿ ಪ್ರಗ್ಯಾ ಸಿಂಗ್ ಪ್ರಮಾಣ ವಚನ ಸ್ವೀಕಾರಕ್ಕೂ ತಕರಾರು ತೆಗೆದಿದ್ದು, ಸಂಸತ್ ನಲ್ಲಿ ಮೊದಲ ದಿನವೇ ಸಾಧ್ವಿ ವಿವಾದಕ್ಕೆ ಗುರಿಯಾಗಿದ್ದಾರೆ.
ಜೂ.17 ರಂದು ಸಂಸತ್ ಅಧಿವೇಶನ ಪ್ರಾರಂಭವಾಗಿದ್ದು, 17 ನೇ ಲೋಕಸಭೆಗೆ ಆಯ್ಕೆಗೊಂಡ ಎಲ್ಲಾ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಾಧ್ವಿ ಪ್ರಗ್ಯಾ ಸಿಂಗ್ ಪ್ರಮಾಣ ವಚನ ಸ್ವೀಕರಿಸುವಾಗ ತಮ್ಮ ಧಾರ್ಮಿಕ ಗುರುವಿನ ಹೆಸರನ್ನು ತಮ್ಮ ಹೆಸರಿನ ಹಿಂದೆ ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆಂಬುಂದು ಈಗ ವಿಪಕ್ಷಗಳ ಹೊಸ ತಕರಾರು.
ವಿಪಕ್ಷಗಳ ತಕರಾರಿಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಸಾಧ್ವಿ, ಅದು ತನ್ನ ಪೂರ್ಣ ಹೆಸರೆಂದು ಸಮರ್ಥನೆ ನೀಡಿದ್ದಾರೆ. ಸ್ವಾಮಿ ಪೂರ್ಣ ಚೇತನಾನಂದ ಅವ್ದೇಶಾನಂದ್ ಗಿರಿ ಎಂಬ ಹೆಸರನ್ನು ಸಾಧ್ವಿ ತಮ್ಮ ಹೆಸರಿನೊಂದಿಗೆ ಜೋಡಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು, ಇದಕ್ಕೆ ಅವಕಾಶವಿಲ್ಲವೆಂದು ವಿಪಕ್ಷ ಸದಸ್ಯರು ಗದ್ದಲ ಉಂಟುಮಾಡಿದ್ದರು.
ಈ ವೇಳೆ ಮಧ್ಯಪ್ರವೇಶಿಸಿದ ಹಂಗಾಮಿ ಸ್ಪೀಕರ್ ವಿರೇಂದ್ರ ಕುಮಾರ್ ಲೋಕಸಭಾ ಪ್ರಧಾನ ಕಾರ್ಯದರ್ಶಿಯ ಸಲಹೆ ಪಡೆದು ಚುನಾವಣೆ ಗೆದ್ದ ಅಭ್ಯರ್ಥಿಯ ಹೆಸರನ್ನು ರಿಟರ್ನಿಂಗ್ ಆಫೀಸರ್ ಏನೆಂದು ನಮೂದಿಸಿರುತ್ತಾರೋ ಅದೇ ದಾಖಲೆಗಳಲ್ಲಿ ಉಳಿಯಲಿದೆ ಎಂದು ಹೇಳಿದರು.