ದೇಶ

ದೆಹಲಿ ಆರೋಗ್ಯ ಯೋಜನೆ ಜೊತೆ ಆಯುಷ್ಮಾನ್ ಭಾರತ್ ವಿಲೀನಕ್ಕೆ ಕೇಜ್ರಿವಾಲ್ ಒತ್ತಾಯ; ಪಿಎಂ ಭೇಟಿ

Sumana Upadhyaya
ನವದೆಹಲಿ: ದೆಹಲಿಯಲ್ಲಿರುವ ಮೊಹಲ್ಲಾ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಆಯುಷ್ಮಾನ್ ಭಾರತ್ ಯೋಜನೆಯನ್ನು ದೆಹಲಿ ಸರ್ಕಾರದ ಆರೋಗ್ಯ ಯೋಜನೆಗಳ ಜೊತೆ ಸೇರಿಸಬಹುದೆ ಎಂದು ಪರಿಶೀಲಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿದ್ದಾರೆ.
ಇಂದು ಪ್ರಧಾನಿಯವರನ್ನು ಭೇಟಿ ಮಾಡಿದ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಎಲ್ಲಾ ರೀತಿಯಲ್ಲಿ ತಮ್ಮ ಸರ್ಕಾರ ನೆರವು ನೀಡಲಿದೆ ಎಂದು ಹೇಳಿದ್ದಾರೆ.
ಎರಡನೇ ಬಾರಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ರಚನೆಯಾದ ನಂತರ ಪ್ರಧಾನಿಯವರನ್ನು ಕೇಜ್ರಿವಾಲ್ ಭೇಟಿ ಮಾಡುತ್ತಿರುವುದು ಇದು ಮೊದಲ ಸಲ. ಮೊನ್ನೆ ಪ್ರಧಾನಿಯವರು ಕರೆದಿದ್ದ ಸರ್ವಪಕ್ಷ ಸಭೆಗೆ ಅರವಿಂದ್ ಕೇಜ್ರಿವಾಲ್ ಗೈರುಹಾಜರಾಗಿದ್ದರು.
ಇಂದಿನ ಭೇಟಿ ವೇಳೆ ಇಬ್ಬರೂ ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಚರ್ಚೆ ನಡೆಸಿದರು.
ದೆಹಲಿ ಸರ್ಕಾರದ ಆರೋಗ್ಯ ಯೋಜನೆ ಮತ್ತಷ್ಟು ದೊಡ್ಡದಾಗಿದ್ದು ಅದರಲ್ಲಿ ಅವಕಾಶಗಳು ಹೆಚ್ಚಿವೆ. ಆದರೂ ಆಯುಷ್ಮಾನ್ ಭಾರತ್ ಯೋಜನೆಯನ್ನು ದೆಹಲಿ ಸರ್ಕಾರದ ಆರೋಗ್ಯ ಯೋಜನೆ ಜೊತೆ ಸೇರಿಸಬಹುದೇ ಎಂದು ಕೇಳಿದ್ದೇನೆ ಎಂದು ಭೇಟಿ ಬಳಿಕ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯಡಿ ದೇಶದ ಸುಮಾರು 50 ಕೋಟಿ ಬಡಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಇದರಡಿ ಈಗಾಗಲೇ ಸುಮಾರು 26 ಲಕ್ಷ ಬಡರೋಗಿಗಳು ಆಸ್ಪತ್ರೆ ಸೇವೆ ಪಡೆದಿದ್ದಾರೆ.
SCROLL FOR NEXT