ದೇಶ

ಅತ್ಯಾಚಾರ ಪ್ರಕರಣ: ಬಿನೊಯ್ ಕೊಡಿಯೇರಿ ವಿರುದ್ಧ ಲುಕ್‌ ಔಟ್ ನೋಟಿಸ್

Sumana Upadhyaya
ತಿರುವನಂತಪುರಂ: ಬಿಹಾರಿ ಮಹಿಳೆಯೊಬ್ಬರ ಅತ್ಯಾಚಾರ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ (ಎಂ) ಕೇರಳ ಘಟಕದ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ, ಬಿನೊಯ್ ಕೊಡಿಯೇರಿ ವಿರುದ್ಧ ಮುಂಬೈ ಪೊಲೀಸರು ಲುಕ್‌ ಔಟ್  ನೋಟಿಸ್ ಜಾರಿ ಮಾಡಿದ್ದಾರೆ. 
ಮುಂಬೈ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ದಿಂಡೋಶಿ ಶಾಖೆಯು ಬಿನೊಯ್ ಕೊಡಿಯೇರಿಯವರ ಜಾಮೀನು ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಲು ನಿರ್ಧರಿಸಿರುವಾಗ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿನೊಯ್ ಕೊಡಿಯೇರಿ ದೇಶವನ್ನು ತೊರೆಯದಂತೆ ತಡೆಯಲು ಮಾತ್ರ ಲುಕ್‌ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಪೊಲೀಸರ ತಂಡ ಕಣ್ಣೂರಿನಲ್ಲಿರುವ ಅವರ ಸ್ಥಳೀಯ ಸ್ಥಳವಾದ ತಿರುವಂಗಡಕ್ಕೆ ಭೇಟಿ ನೀಡಿದ್ದರೂ, ಮಹಿಳೆ ಪ್ರಕರಣ ದಾಖಲಿಸಿದ ನಂತರ ತಲೆ ಮರೆಸಿಕೊಂಡಿರುವ ಬಿನೊಯ್ ಅವರನ್ನು ಪತ್ತೆಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ.
ಪೊಲೀಸ್ ತಂಡವು 72 ಗಂಟೆಗಳ ಅವಧಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಿದೆ.
33 ವರ್ಷದ ಮಹಿಳೆ ತನ್ನ ದೂರಿನಲ್ಲಿ ಮದುವೆಯಾಗುವುದಾಗಿ ಭರವಸೆ ಕೊಟ್ಟು ನಂಬಿಸಿ ಬಿನೊಯ್‌ನಿಂದ ಮೋಸ ಹೋಗಿರುವುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ಡಿಎನ್‌ಎ ಪರೀಕ್ಷೆಗೂ ಒತ್ತಾಯಿಸಿದ್ದಾರೆ. 
ಈ ಹಿಂದೆ, ಬಿನೊಯ್ ಈ ಆರೋಪ ಆಧಾರ ರಹಿತ, ಕೇವಲ ಬ್ಲ್ಯಾಕ್‌ಮೇಲ್ ಮಾಡಲು ಈ ಆರೋಪ ಮಾಡಲಾಗಿದೆ ಎಂದು ತಳ್ಳಿಹಾಕಿದ್ದರು.
ಮುಂಬೈನ ಒಶಿವಾರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಪ್ರಕಾರ, 2008 ರಲ್ಲಿ ಬಿನೊಯ್ ಅವರು ದುಬೈನಲ್ಲಿದ್ದಾಗ ಬಾರ್ ನರ್ತಕಿ ಮಹಿಳೆಯೊಂದಿಗೆ ಪರಿಚಯವಾಗಿ ನಂತರ ವಿವಾಹವಾಗಿದ್ದರು. ನಂತರ, ಅವರು ಕೆಲಸವನ್ನು ಬಿಟ್ಟು ಮುಂಬೈನ ಅಂಧೇರಿಗೆ ತೆರಳಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ನಂತರ ದೈಹಿಕ ಸಂಬಂಧದಿಂದಾಗಿ ಅಕೆ ಗರ್ಭಿಣಿಯಾಗಿದ್ದರು. 
ಬಿನೋಯ್ ಅವರಿಗೆ ಈಗಾಗಲೇ ಬೇರೆ ಮದುವೆಯಾಗಿದೆ ಎಂಬ ವಿಷಯ ತಿಳಿದ ನಂತರ ಆಕೆ ಅವರಿಂದ ಅಂತರ ಕಾಯ್ಡುಕೊಂಡಿದ್ದರು. 
ಈ ನಡುವೆ ಕೊಡಿಯೇರಿ ಬಾಲಕೃಷ್ಣನ್ ಮಾತನಾಡಿ, ಕುಟುಂಬದ ತಪ್ಪಿಗೆ ಪಕ್ಷ ಜವಾಬ್ದಾರವಲ್ಲ ಎಂದು ಹೇಳಿದ್ದಾರೆ. ತನ್ನ ಮಗನ ರಕ್ಷಣೆಗೆ ತಾವು ಯಾವ ಪ್ರಯತ್ನ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿನೊಯ್ ವಯಸ್ಕನಾಗಿರುವುದರಿಂದ, ಮೇಲಾಗಿ ಈ ವಿಷಯ ನ್ಯಾಯಾಲಯದಲ್ಲಿರುವುದರಿಂದ ಅವರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. 
ಮಗನ ಮೇಲಿನ ಲೈಂಗಿಕ ಪ್ರಕರಣದ ಹಿನ್ನಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾಧ್ಯಮ ವರದಿಗೆ ಪ್ರತಿಕ್ರಯಿಸಿದ ತಂದೆ ಕೊಡಿಯೇರಿ ಬಾಲಕೃಷ್ಣನ್, "ನಾನು ತಪ್ಪು ಮಾಡಿದರೂ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ, ತೆಗೆದುಕೊಳ್ಳಬೇಕು" ಎಂದರು.
SCROLL FOR NEXT