ದೇಶ

ಅರೇಬಿಯನ್ ಸಮುದ್ರದಲ್ಲಿ ಚೀನಾ-ಪಾಕ್ ನ ಭಾರತ ವಿರೋಧಿ ಯೋಜನೆಗಳನ್ನು ವಿಫಲಗೊಳಿಸಿದ ’ರಾ’ ರೋಚಕ ಕಥೆ

Srinivas Rao BV
ನವದೆಹಲಿ: ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಹೆಚ್ಚುತ್ತಿದ್ದ ಚೀನಾ-ಪಾಕ್ ಸಂಬಂಧದ ಪ್ರಾಬಲ್ಯವನ್ನು ಭಾರತೀಯ ಗುಪ್ತಚರ ಇಲಾಖೆ ’ರಾ’ ದುರ್ಬಲಗೊಳಿಸಿದೆ. 
ಕಡಲ ಪ್ರದೇಶದ ಗುಪ್ತಚರ ಜಾಲವನ್ನು ಪರಿಣಾಮಕಾರಿಯಾಗಿರಿಸುವ ಮೂಲಕ ರಾ ಚೀನಾ-ಪಾಕ್ ಸಂಬಂಧದ ಪ್ರಾಬಲ್ಯವನ್ನು ಕುಂಠಿತಗೊಳಿಸಿದೆ. 
ಕಳೆದ 8 ರಿಂಗಳ ಹಿಂದೆ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಧಿಕಾರಾವಧಿಯಲ್ಲಿ ಅಲ್ಲಿನ ರಾಜಧಾನಿ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ನ ಸಾಗರೋತ್ತರ ಹಬ್ ಆಗಿತ್ತು. ಆದರೆ ರಾ ಚಾಣಾಕ್ಷ ತಂತ್ರದಿಂದಾಗಿ ಮಾಲ್ಡೀವ್ಸ್ ನಲ್ಲಿ ಐಎಸ್ಐ ನಡೆಸುತ್ತಿದ್ದ ಯೋಜನೆಗಳನ್ನು ವಿಫಲಗೊಳಿಸಿದೆ.
ಮಾಲ್ಡೀವ್ಸ್ ನಲ್ಲಿ ಐಎಸ್ಐ ಚೀನಾದ ಗುಪ್ತಚರ ಸಂಸ್ಥೆ ಎಂಎಸ್ಎಸ್ ಹಾಗೂ ಮಾಲ್ಡೀವ್ಸ್ ನ ಅಂದಿನ ಅಧ್ಯಕ್ಷರ ನೆರವು ಪಡೆದು ಭಾರತ ವಿರೊಧಿ ಕಾರ್ಯಾಚರಣೆಯನ್ನು ನಡೆಸುತ್ತಿತ್ತು.  
ಆದರೆ ಮಾಲ್ಡೀವ್ಸ್ ನ ಅಧ್ಯಕ್ಷರಾಗಿ ಇಬ್ರಾಹಿಮ್ ಮೊಹಮ್ಮದ್ ಸೋಲ್ಹಿ ಅಧಿಕಾರ ವಹಿಸಿಕೊಂಡ ನಂತರ ಪರಿಸ್ಥಿತಿಗಳು ಭಾರತಕ್ಕೆ ಪೂರಕವಾಗಿ ಬದಲಾಗತೊಡಗಿತು. ಇತ್ತೀಚೆಗೆ ಮೋದಿ ಎರಡನೇ ಅವಧಿಗೆ ಆಯ್ಕೆಗೊಂಡ ನಂತರ ಮೊದಲ ವಿದೇಶ ಪ್ರವಾಸವನ್ನು ಮಾಲ್ಡೀವ್ಸ್ ಗೆ ಕೈಗೊಂಡಿದ್ದು ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ಚೀನಾ-ಪಾಕ್ ನ ಭಾರತ ವಿರೋಧಿ ಚಟುವಟಿಕೆಗಳನ್ನು ತಡೆಯುತ್ತಿದ್ದ ನಮ್ಮ ಭದ್ರತಾ ಹಾಗೂ ಗುಪ್ತಚರ ಇಲಾಖೆಯ ನೈತಿಕ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. 
ಮೋದಿ ಎರಡನೇ ಅವಧಿಗೆ ಆಯ್ಕೆಯಾದ ನಂತರ ಮೊದಲ ವಿದೇಶ ಪ್ರವಾಸವನ್ನು ಮಾಲ್ಡೀವ್ಸ್ ಗೆ ಕೈಗೊಳ್ಳುವ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್  ದೋವಲ್ ಅವರ ತಂತ್ರವಿದೆ ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. 
SCROLL FOR NEXT