ದೇಶ

ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ಪ್ರಕರಣ: ಮಧ್ಯಪ್ರದೇಶ ಬಿಜೆಪಿ ಶಾಸಕನಿಗೆ ಜಾಮೀನು

Raghavendra Adiga
ಇಂದೋರ್: ಅಧಿಕಾರಿಯೊಬ್ಬರಿಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಬಂಧಿತನಾಗಿದ್ದ ಭಾರತೀಯ ಜನತಾ ಪಕ್ಷದ ಶಾಸಕ ಆಕಾಶ್ ವಿಜಯವರ್ಗಿಯಾ ಅವರನ್ನು ಭಾನುವಾರ ಬೆಳಿಗ್ಗೆ ಸ್ಥಳೀಯ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಭೋಪಾಲ್‌ನ ನ್ಯಾಯಾಲಯದಿಂದ ಜಾಮೀನು ಆದೇಶ ಇಂದೋರ್ ಗೆ ಲುಪಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಭೋಪಾಲ್ ಮೂಲದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸುರೇಶ್ ಸಿಂಗ್ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರ ಪುತ್ರ ಶಾಸಕ ಆಕಾಶ್ ಅವರ ಮೇಲೆ ಹಲ್ಲೆ ಹಾಗೂ ಕಾನೂನುಬಾಹಿರ ಪ್ರತಿಭಟನೆ ನಡೆಸಿದ ಆರೋಪ ಇತ್ತು. ಇದೀಗ ಈ ಪ್ರಕರಣದಲ್ಲಿ ಜಾಮೀನು ದೊರಕಿದೆ.
ಹಲ್ಲೆ ಪ್ರಕರಣದ ಸಂಬಂಧ 50,000 ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ 20,000 ರೂ.ಬಾಂಡ್ ನೀಡಿ ಜಾಮೀನು ಪಡೆಯಲಾಗಿದೆ.
ಇಂದೋರ್ -3 ಅಸೆಂಬ್ಲಿ ವಿಭಾಗವನ್ನು ಪ್ರತಿನಿಧಿಸುವ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಆಕಾಶ್ ವಿಜಯವರ್ಗಿಯಾ (34) ಕಳೆದ ಬುಧವಾರ ಪುರಸಭೆ ಅಧಿಕಾರಿ ಧಿರೇಂದ್ರ ಸಿಂಗ್ ಬೈಸ್ ಅವರ ಮೇಲೆ  ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಮಾಡಿದ್ದು ಇದು ಟಿವಿ ಕ್ಯಾಮರಾಗಳಲ್ಲಿಯೂ ಸೆರೆಯಾಗಿತ್ತು.  ಶಿಥಿಲಗೊಂಡಿದ್ದ ಮನೆಯೊಂದನ್ನು ನೆಲಸಮ ಮಾಡುವುದಕ್ಕೆ ಶಾಸಕ ಆಕಾಶ್ ವಿರೋಧಿಸಿ ಈ ಕೃತ್ಯ ಎಸಗಿದ್ದರು.
SCROLL FOR NEXT