ದೇಶ

ಪ್ರತಿಪಕ್ಷಗಳನ್ನು ಬಯ್ಯುವ ಬದಲು ವೈಮಾನಿಕ ದಾಳಿ ಬಗ್ಗೆ ಇಡೀ ವಿಶ್ವ ನಂಬುವಂತೆ ಮಾಡಿ: ಚಿದಂಬರಂ

Lingaraj Badiger
ನವದೆಹಲಿ: ಪಾಕಿಸ್ತಾನದ ಬಾಲಕೋಟ್ ನ ಉಗ್ರರ ಕ್ಯಾಂಪ್ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ಕುರಿತು ದೇಶದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ದಾಳಿಗೆ ಸಂಬಂಧಿಸಿದಂತೆ ಪ್ರತಪಿಕ್ಷಗಳನ್ನು ಬಯ್ಯುವ ಬದಲು, ಈ ಬಗ್ಗ ಇಡೀ ವಿಶ್ವ ನಂಬುವಂತೆ ಮಾಡಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಹೇಳಿದ್ದಾರೆ.
ನಾನೊಬ್ಬ ದೇಶದ ನಾಗರಿಕನಾಗಿ ಸರ್ಕಾರವನ್ನು ನಂಬುತ್ತೇನೆ. ಆದರೆ ಸರ್ಕಾರ ಇಡೀ ವಿಶ್ವವನ್ನು ನಂಬಿಸುವ ಪ್ರಯತ್ನ ಮಾಡಲೇಬೇಕು.  ಅದನ್ನು ಬಿಟ್ಟು ಪ್ರತಿಪಕ್ಷಗಳನ್ನು ಬಯ್ಯುತ್ತಾ ಕೂರಬಾರದು ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ವೈಮಾನಿಕ ದಾಳಿ ನಡೆಸಿದೆ ಎನ್ನುವುದನ್ನು ನಂಬಲು ಸಿದ್ಧನಿದ್ದೇನೆ. ಆದರೆ, 300 ಜನರು ಸತ್ತಿದ್ದಾರೆ ಎಂದು ಹೇಳಿದವರಾರು ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಚಿದಂಬರಂ​, “ಭಾರತೀಯ ವಾಯುಸೇನೆಯ ಮುಖ್ಯ ಏರ್​ ಮಾರ್ಷಲ್​ ಬಾಲಕೋಟ್​ ದಾಳಿಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬುದನ್ನು ಹೇಳಲು ನಿರಾಕರಿಸಿದ್ದಾರೆ. ಅಲ್ಲಿನ ನಾಗರಿಕರಿಗೆ ಅಥವಾ ಸೇನೆಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ. ಹೀಗಿರುವಾಗ 300-350 ಜನ ಸತ್ತಿದ್ದಾರೆ ಎನ್ನುವ ಲೆಕ್ಕವನ್ನು ಹೇಳಿದವರಾರು,” ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
ವೈಮಾನಿಕ ದಾಳಿ ಬಗ್ಗೆ ಪ್ರತಿಪಕ್ಷಗಳು ಅನುಮಾನ ಬರುವ ರೀತಿ ನಡೆದುಕೊಳ್ಳುತ್ತಿವೆ. ಈ ಬಗ್ಗೆ ನನ್ನನ್ನೇ ಪ್ರಶ್ನೆ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿಯಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆಗೆ ಚಿದಂಬರಂ  ತಿರುಗೇಟು ನೀಡಿದ್ದಾರೆ. “ಬಾಲಕೋಟ್​ ಮೇಲೆ ಏರ್​ಸ್ಟ್ರೈಕ್​ ನಡೆಸಿದ ನಂತರ ಭಾರತೀಯ ವಾಯುಸೇನೆಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರೇ ಮೊದಲು ಸೆಲ್ಯೂಟ್​ ಹೊಡೆದಿದ್ದು. ಇದನ್ನು ಮೋದಿ ಮರೆತಿದ್ದೇಕೆ,” ಎಂದು ಪ್ರಶ್ನಿಸಿದ್ದಾರೆ.
SCROLL FOR NEXT