ಜಮ್ಮು-ಕಾಶ್ಮೀರ: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಪೋಟ ನಡೆಸಿದ ಆರೋಪಿಯನ್ನು ಬಂಧಿಸಿರುವುದಾಗಿ ಜಮ್ಮು- ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಯಾಸಿನ್ ಜಾವಿದ್ ಭಟ್ ಬಂಧಿತ ಆರೋಪಿಯಾಗಿದ್ದು, ಈತನನ್ನು ನಾಗೊರ್ತಾ ಬಳಿಯ ಟೋಲ್ ಪ್ಲಾಜಾ ಬಳಿ ಬಂಧಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲ ಸಾಕ್ಷ್ಯಗಳ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಐಜಿಪಿ ಎಂ ಕೆ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಟ್ ಕುಗ್ಲಾಮ್ ಜಿಲ್ಲೆಯ ಹಿಜ್ಬುಲ್ ಮುಜಾಹಿದ್ದೀನ್ ಜಿಲ್ಲಾ ಕಮಾಂಡರ್ ಪಾರೂಖ್ ಅಹ್ಮದ್ ಭಟ್ ಅವರೊಂದಿಗೆ ಸಂಪರ್ಕ ಹೊಂದಿದ್ದು, ಆತನಿಂದ ಗ್ರೇನೆಡ್ ಖರೀದಿಸಿದ್ದಾಗಿ ಭಟ್ ತಪೊಪ್ಪಿಸಿಕೊಂಡಿದ್ದಾನೆ ಎಂದು ಸಿನ್ಹಾ ಹೇಳಿದರು
ಜನದಟ್ಟಣೆಯ ಬಸ್ ನಿಲ್ದಾಣದಲ್ಲಿ ಶಂಕಿತ ಉಗ್ರ ನಡೆಸಿದ ಗ್ರೆನೇಡ್ ಸ್ಪೋಟದಿಂದಾಗಿ 17 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, 32 ಜನರು ಗಾಯಗೊಂಡಿದ್ದರು. ಮೂವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಮೇನಿಂದಾಚೆಗೆ ಜಮ್ಮು ಬಸ್ ನಿಲ್ದಾಣದಲ್ಲಿ ಉಗ್ರರು ನಡೆಸಿರುವ ಮೂರನೇಯ ಗ್ರೆನೇಡ್ ಸ್ಪೋಟ ಇದಾಗಿದೆ.ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತರುವಂತಹ ನಿಟ್ಟಿನಲ್ಲಿ ಈ ಸ್ಪೋಟ ನಡೆಸಿರುವ ಸಾಧ್ಯತೆ ಎಂಬುದು ತಿಳಿದುಬಂದಿದೆ.
ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಯ ಪ್ರಿನ್ಸಿಪಾಲ್ ಸುನಂದಾ ರೈನಾ ಹೇಳಿದ್ದಾರೆ.