ದೇಶ

ಅಭಿನಂದನ್ ಗೆ ಪರಮ ವೀರ ಚಕ್ರ ನೀಡಿ: ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ

Lingaraj Badiger
ಚೆನ್ನೈ: ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಶೌರ್ಯ ಪ್ರದರ್ಶಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಪರಮ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರತಿಕೂಲ ಪರಿಸ್ಥಿತಿಯಲ್ಲೂ ಅದ್ಭುತ ಸಮತೋಲನ ಮತ್ತು ವಿಶ್ವಾಸವನ್ನು ಪ್ರದರ್ಶಿಸಿದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ದೇಶದ ಅತ್ಯುನ್ನತ ಸೇನಾ ಗೌರವ ನೀಡಬೇಕು ಎಂದು ಪಳನಿಸ್ವಾಮಿ ಒತ್ತಾಯಿಸಿದ್ದಾರೆ.
ಪ್ರಧಾನಿಯವರ ರಾಜತಾಂತ್ರಿಕ ಕ್ರಮದಿಂದಾಗಿ ಹಾಗೂ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದೆ ಎಂದು ತಮಿಳುನಾಡು ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಫೆಬ್ರವರಿ 27ರಂದು ಪಾಕ್ ವಾಯುಪಡೆಯ ಯುದ್ಧ ವಿಮಾನಗಳೊಂದಿಗೆ ಹೋರಾಟ ನಡೆಸಿದ್ದ ಅಭಿನಂದನ್ ಅವರು ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ಮಿಗ್-21 ಯುದ್ಧ ವಿಮಾನಕ್ಕೆ ಶತ್ರುದೇಶದ ವಿಮಾನದ ಕ್ಷಿಪಣಿ ತಾಗಿ ಪತನಗೊಂಡಿತ್ತು. ಪ್ಯಾರಾಚೂಟ್ ಸಹಾಯದಿಂದ ಸುರಕ್ಷಿತವಾಗಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಇಳಿದಿದ್ದ ಅಭಿನಂದನ್ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆದಿತ್ತು. ಬಳಿಕ ಜಿನಿವಾ ಒಪ್ಪಂದಕ್ಕೆ ಬದ್ಧವಾಗಿ ಬಿಡುಗಡೆ ಮಾಡಿತ್ತು.
SCROLL FOR NEXT