ದೇಶ

ದೇಶದ ಪ್ರಧಾನಿ ಬಗ್ಗೆ 'ಉಗ್ರಗಾಮಿ' ಪದ ಬಳಕೆ ಸರಿಯಲ್ಲ: ಕಾಂಗ್ರೆಸ್ ನಾಯಕಿ ರೇಣುಕಾ ಚೌದರಿ

Srinivasamurthy VN
ನವದೆಹಲಿ: ನರೇಂದ್ರ ಮೋದಿ ನೋಡಲು ಉಗ್ರಗಾಮಿಯಂತೆ ಕಾಣುತ್ತಾರೆ ಎಂಬ ಕಾಂಗ್ರೆಸ್ ನಾಯಕಿ ವಿಜಯಶಾಂತಿ ಅವರ ಹೇಳಿಕೆ ಅವರದೇ ಪಕ್ಷದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ದೇಶದ ಪ್ರಧಾನಿ ಬಗ್ಗೆ 'ಉಗ್ರಗಾಮಿ' ಪದ ಬಳಕೆ ಸರಿಯಲ್ಲ ಎಂದು ಹಿರಿಯ ನಾಯಕಿ ರೇಣುಕಾ ಚೌದರಿ ಹೇಳಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರುವ ರೇಣುಕಾ ಚೌದರಿ ಅವರು, ವಿಜಯಶಾಂತಿ ಅವರ ಹೇಳಿಕೆಯನ್ನು ನಾನು ಕೇಳಿಲ್ಲ. ಆದರೆ ಒಂದು ವೇಳೆ ಅವರು ಪ್ರಧಾನಿ ವಿರುದ್ಧ ಉಗ್ರಗಾಮಿ ಪದ ಬಳಕೆ ಮಾಡಿದ್ದರೆ ಅದು ಸರಿಯಲ್ಲ. ಅವರು ಏನೇ ಆಗಿರಲಿ ದೇಶದ ಪ್ರಧಾನಿ ಕುರಿತು ಇಂತಹ ಪದ ಬಳಕೆ ಸರಿಯಲ್ಲ. ಅವರನ್ನು ನಾವು ಕೂಡ ವಿರೋಧಿಸುತ್ತೇವೆ. ಆದರೆ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ರೇಣುಕಾ ಚೌದರಿ ಹೇಳಿದ್ದಾರೆ.
ತೆಲಂಗಾಣದ ಶಂಶಾಬಾದ್​ನಲ್ಲಿ ಇಂದು ಸಂಜೆ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿಯವರಿಗಿಂತ ಮುಂಚೆ ಮಾತನಾಡಿದ್ದ ವಿಜಯಶಾಂತಿ, 'ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ, ಜನ ಹೆದರಿಕೆಯಲ್ಲಿ ಬದುಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವಾಗ ಬಾಂಬ್​ ಸ್ಫೋಟ ಮಾಡುತ್ತಾರೆ ಎಂಬ ಭಯದಲ್ಲಿ ಎಲ್ಲರೂ ಇರುವಂತಾಗಿದೆ. ಮೋದಿ ನೋಡಲು ಉಗ್ರಗಾಮಿಯಂತೆ ಕಾಣಿಸುತ್ತಾರೆ. ಜನರನ್ನು ಪ್ರೀತಿಸುವ ಬದಲು ಅವರು ಜನರನ್ನು ಹೆದರಿಸುತ್ತಾರೆ. ದೇಶದ ಪ್ರಧಾನಿ ಈ ರೀತಿ ಇರುವುದು ಸರಿಯಲ್ಲ ಎಂದು ಹೇಳುವ ಮೂಲಕ ವಿಜಯ ಶಾಂತಿ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
SCROLL FOR NEXT