ಉನ್ನಾವೋ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಈ ಬಾರಿ, 2019ರ ಲೋಕಸಭೆ ಚುನಾವಣೆ ನಂತರ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸುನಾಮಿ ಎಷ್ಟು ತೀವ್ರವಾಗಿದೆ ಎಂದರೆ, 2019ರ ಬಳಿಕ ಚುನಾವಣೆಯ ಅಗತ್ಯವೇ ಇರುವುದಿಲ್ಲ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯುವುದಿಲ್ಲ ಎಂದು ಸಾಕ್ಷಿ ಮಹಾರಾಜ್ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ನಾನು ಒಬ್ಬ ಸನ್ಯಾಸಿ. ದೇಶದ ಮುಂದಿನ ಭವಿಷ್ಯ ಏನು ಅಂತ ಗೊತ್ತಿರುತ್ತೆ. ದೇಶದಲ್ಲಿ ಮೋದಿ ಸುನಾಮಿಯೇ ಎದ್ದಿದೆ. ದೇಶಾದ್ಯಂತ ಹೊಸ ಜಾಗೃತಿ ಮೂಡಿದೆ. 2019ರ ಚುನಾವಣೆ ಬಳಿಕ 2024ರಲ್ಲಿ ಮತ್ತೆ ಚುನಾವಣೆಯ ಅಗತ್ಯವೇ ಬಾರದು ಎಂದು ನನ್ನ ಅನಿಸಿಕೆ. ಇದೊಂದೇ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾವು ಶ್ರಮಿಸಿದರೆ ಸಾಕು ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಉತ್ತರ ಪ್ರದೇಶದ ಉನ್ನಾವೋ ಕ್ಷೇತ್ರದ ಸಂಸದರಾಗಿರುವ ಸಾಕ್ಷಿ ಮಹಾರಾಜ್ ಅವರು ಇತ್ತೀಚಿಗಷ್ಟೇ, ನಾಲ್ಕು ಪತ್ನಿಯರು ಹಾಗೂ 40 ಮಕ್ಕಳಿಂದಾಗಿ ದೇಶದ ಜನಸಂಖ್ಯೆ ಹೆಚ್ಚಾಗಿದೆ ಎಂದು ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸಿದ್ದರು.