ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಹಿಂದೇಟು ಹಾಕುತ್ತಾ, ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಚೀನಾ ಇದೀಗ ಅತ್ಯಾಧುನಿಕ ಡ್ರೋನ್ ಗಳನ್ನು ಪಾಕ್ ಗೆ ಮಾರಾಟ ಮಾಡಲು ಮುಂದಾಗಿದ್ದು ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ.
ಚೀನಾ ತನ್ನ ಅತ್ಯಾಧುನಿಕ ಡ್ರೋನ್ ಗಳಾದ ರೈನ್ ಬೋ ಗಳನ್ನು ಪಾಕ್ ಗೆ ಮಾರಾಟ ಮಾಡವ ಮೂಲಕ ಬಹಿರಂಗವಾಗಿಯೇ ಪಾಕ್ ಗೆ ಬೆಂಬಲ ಸೂಚಿಸಿದೆ. ಪಾಕಿಸ್ತಾನದ ಬಾಲಕೋಟ್ ನಲ್ಲಿ ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಂತರ ತನ್ನ ರೈನ್ ಬೋ ಸಿಎಚ್-4 ಹಾಗೂ ಸಿಎಚ್-5ಗಳನ್ನು ಮಾರಾಟ ಮಾಡಲು ಮುಂದಾಗಿದೆ.
ಭಾರತದ ದಿಢೀರ್ ದಾಳಿ ನಂತರ ಎಚ್ಚೇತ್ತುಕೊಂಡಿರುವ ಪಾಕಿಸ್ತಾನ ತನ್ನ ಗಡಿ ಸುತ್ತಲೂ ಕಣ್ಗಾವಲು ಇರಿಸಲು ಹೆಚ್ಚಿನ ಡ್ರೋನ್ ಗಳನ್ನು ನಿಯೋಜಿಸಲು ಪಾಕಿಸ್ತಾನ ಮುಂದಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಸಿಎಚ್-4 ಡ್ರೋನ್ 400 ಕೆಜಿಯಷ್ಟು ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹಾಗೂ 40 ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡುತ್ತದೆ. 5 ಸಾವಿರ ಕಿಮೀವರೆಗೆ ತನ್ನ ವ್ಯಾಪ್ತಿ ಹೊಂದಿದೆ. ಇನ್ನು ಸಿಎಚ್-5 1000 ಕೆಜಿಯಷ್ಟು ಸ್ಫೋಟಕಗಳನ್ನು ಹೊತ್ತೊಯ್ಯುವ 60 ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ.