ವಿಶ್ವಾಸ ಮತ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್
ಪಣಜಿ: ಸಿಎಂ ಆದ ಕೇವಲ 48 ಗಂಟೆಗಳಲ್ಲೇ ವಿಶ್ವಾಸಮತ ಅಗ್ನಿ ಪರೀಕ್ಷೆಯಲ್ಲಿ ನೂತನ ಗೋವಾ ಸಿಎಂ ಪ್ರಮೋದ್ ಸಾವಂತ್ ಗೆಲುವು ಸಾಧಿಸಿದ್ದಾರೆ.
ಗೋವಾ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸ ಮತದಲ್ಲಿ ಸಿಎಂ ಪ್ರಮೋದ್ ಸಾವಂತ್ ಗೆಲುವು ಸಾಧಿಸಿದ್ದು, ಪ್ರಮೋದ್ ಸಾವಂತ್ ಸರ್ಕಾರಕ್ಕೆ 20 ಶಾಸಕರು ಬೆಂಬಲ ಘೋಷಣೆ ಮಾಡಿದ್ದಾರೆ. ಆ ಮೂಲಕ ಪ್ರಮೋದ್ ಸಾವಂತ್ ಸರ್ಕಾರ ಸುಭದ್ರವಾಗಿದೆ.
ಮೂಲಗಳ ಪ್ರಕಾರ ಬಿಜೆಪಿ ನೇತೃತ್ವ ಮೈತ್ರಿಕೂಟಕ್ಕೆ ಒಟ್ಟು 20 ಶಾಸಕರು ಬೆಂಬಲ ನೀಡಿದ್ದು, ಬಿಜೆಪಿಯ 11, ಮಿತ್ರಪಕ್ಷಗಳಾದ ಜಿಎಫ್ ಪಿ, ಎಂಜಿಪಿ ತಲಾ ಮೂರು ಶಾಸಕರು ಮತ್ತು 3 ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಅಂತೆಯೇ ಓರ್ವ ಬಿಜೆಪಿ ಶಾಸಕ ಅನಾರೋಗ್ಯದಿಂದ ವಿಶ್ವಾಸಮತ ಯಾಚನೆಗೆ ಗೈರಾಗಿದ್ದು, ಗೈರಾದ ಶಾಸಕನನ್ನು ಪಾಂಡುರಂಗ ಮಡ್ಕೈಕರ್ ಎನ್ನಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಇದೀಗ 36 ಮಂದಿ ಶಾಸಕರಿದ್ದು, ಸಿಎಂ ಮನೋಹರ್ ಪರಿಕ್ಕರ್ ಅವರ ಸಾವು, ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಂತೆಯೇ ಇಬ್ಬರು ಕಾಂಗ್ರೆಸ್ ಶಾಸಕರಾದ ಸುಭಾಷ್ ಶಿರೋಡ್ಕರ್ ಹಾಗೂ ದಯಾನಂದ್ ಸೊಪ್ಚೆ ಅವರೂ ಕೂಡ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಗೋವಾ ವಿಧಾನಸಭೆ ಸದಸ್ಯ ಬಲ ಇದೀಗ 36ಕ್ಕೆ ಕುಸಿದಿದ್ದು, ಬಹುಮತ ಸಾಬೀತಿಗೆ 19 ಶಾಸಕರ ಬೆಂಬಲ ಬೇಕಿತ್ತು.