ದೇಶ

ಈಶಾನ್ಯ ಭಾರತದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಒಂದೇ ವಾರದಲ್ಲಿ 25 ಮುಖಂಡರ ರಾಜಿನಾಮೆ!

Srinivasamurthy VN
ಇಟಾನಗರ: ಈಶಾನ್ಯ ಭಾರತದಲ್ಲಿ ಸರ್ಕಾರ ರಚನೆ ಮಾಡುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿದ್ದ ಬಿಜೆಪಿಗೆ ಇದೀಗ ಭಾರಿ ಹಿನ್ನಡೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿನ ಟಿಕೆಟ್ ಹಂಚಿಕೆ ಸಂಬಂಧ ಭುಗಿಲೆದ್ದಿರುವ ಭಿನ್ನಮತದಲ್ಲಿ ಕೇವಲ ಒಂದು ವಾರದಲ್ಲಿ 25 ಮುಖಂಡರು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.
ಹೌದು.. ಅರುಣಾಚಲ ಪ್ರದೇಶದ ಬಿಜೆಪಿ ಸರ್ಕಾರದ ಇಬ್ಬರು ಸಚಿವರು, ಆರು ಶಾಸಕರು ಸೇರಿದಂತೆ ಪಕ್ಷದ 18 ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಬಹುದೊಡ್ಡ ಆಘಾತ ನೀಡಿದ್ದಾರೆ. ಏಪ್ರಿಲ್​ 11ರಂದು ಲೋಕಸಭಾ ಚುನಾವಣೆ ಜೊತೆಗೆ ಅರುಣಾಚಲಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯುವ ಸಂದರ್ಭದಲ್ಲಿಯೇ ನಾಯಕರು ನೀಡಿರುವ ರಾಜೀನಾಮೆಯಿಂದ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಚುನಾವಣೆಗೆ ಟಿಕೆಟ್​ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದೊಂದು ವಾರದಲ್ಲಿ ಈಶಾನ್ಯ ರಾಜ್ಯದಲ್ಲಿ ಒಟ್ಟು 25 ನಾಯಕರು ಪಕ್ಷದಿಂದ ಹೊರಗೆ ಬಂದಿದ್ದು, ರಾಜಿನಾಮೆ ನೀಡಿದ ಮುಖಂಡರ ಪೈಕಿ ಬಹುತೇಕರು ಕಾನ್ರಾಡ್ ಸಂಗಮ್​ ಅವರ ನ್ಯಾಷನಲ್​ ಪೀಪಲ್ಸ್​ ಪಾರ್ಟಿ (ಎನ್​ಪಿಪಿ) ಸೇರಿದ್ದಾರೆ.  ಅರುಣಾಚಲಪ್ರದೇಶದಲ್ಲಿ ಗೃಹ ಸಚಿವ ಕುಮಾರ್ ವೈ, ಪ್ರವಾಸೋದ್ಯಮ ಸಚಿವ ಜಾರ್ಕರ್ ಗಮ್ಲಿನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜರ್ಪುಮ್ ಗಂಭೀನ್ ಮತ್ತು ಆರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಕಿರೆನ್ ರಿಜಿಜು, 'ಪಕ್ಷದ ಟಿಕೆಟ್ ಹಂಚಿಕೆ ಅದು ಪಕ್ಷದ ಆಂತರಿಕ ವಿಚಾರ. ರಾಜ್ಯ ಚುನಾವಣಾ ಸಮಿತಿಯಿಂದ ಶಿಫಾರಸ್ಸುಗೊಂಡಂತೆ ಕೇಂದ್ರ ಚುನಾವಣಾ ಸಮಿತಿ ಟಿಕೆಟ್​ ಅಂತಿಮಗೊಳಿಸುತ್ತದೆ. ಹೌದು, ಹಾಲಿ ಸಚಿವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ಅದು ಸ್ಥಳೀಯ ವಾಸ್ತವದ ಮೌಲ್ಯಮಾಪನದ ಮೇಲೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಮುಖ್ಯಮಂತ್ರಿ ಕುಟುಂಬಕ್ಕೆ ಮೂರು ಟಿಕೆಟ್ ನೀಡಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಗೃಹ ಸಚಿವ ಕುಮಾರ್ ವೈ ಅವರು, 'ಅವರು (ಮೋದಿ) ಕಾಂಗ್ರೆಸ್​ ವಂಶಪಾರಂಪರ್ಯ ರಾಜಕೀಯವನ್ನು ಟೀಕೆ ಮಾಡುತ್ತಾರೆ. ಆದರೆ, ಅರುಣಾಚಲಪ್ರದೇಶದಲ್ಲಿ ಬಿಜೆಪಿ ಮುಖ್ಯಮಂತ್ರಿ ಕುಟುಂಬಕ್ಕೆ ಮೂರು ಟಿಕೆಟ್ ಗಳನ್ನು ನೀಡಿದ್ದಾರೆ ಅಸಮಾಧಾನ ಹೊರಹಾಕಿದ್ದಾರೆ. 'ಅರುಣಾಚಲ ಪ್ರದೇಶ 60 ವಿಧಾನಸಭಾ ಕ್ಷೇತ್ರದಲ್ಲಿ ಎನ್​ಪಿಪಿ ಕನಿಷ್ಠ 30ರಿಂದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿದೆ. ನಾವು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ನಮ್ಮದೇ ಸ್ವಂತ ಸರ್ಕಾರ ರಚನೆ ಮಾಡುತ್ತೇವೆ ಎಂದು ಎನ್​ಪಿಪಿ ಹಿರಿಯ ನಾಯಕ ಥಾಮಸ್ ಸಂಗ್ಮಾ ಹೇಳಿದ್ದಾರೆ. ಪಕ್ಷ ಅಥವಾ ನನ್ನ ಜನಗಳು ನಡುವೆ ಆಯ್ಕೆ ಇತ್ತು. ಚುನಾವಣಾ ರಾಜಕೀಯದಲ್ಲಿ ಪಕ್ಷಕ್ಕಿಂತ ಜನರೇ ಮುಖ್ಯವಾಗುತ್ತಾರೆ. ಮತ್ತು ನಾನು ನನ್ನ ಬೆಂಬಲಿಗರ ನಿರ್ಧಾರದಂತೆ ಹೋಗಿದ್ದೇನೆ ಎಂದು ಸಚಿವ ಗಮ್ಲಿನ್ ತಿಳಿಸಿದ್ದಾರೆ. 
ಎನ್​ಪಿಪಿ ಬುಧವಾರದೊಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಬಿಜೆಪಿ ಈಗಾಗಲೇ ವಿಧಾನಸಭೆಯ 54 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
SCROLL FOR NEXT