ದೇಶ

ಗೋವಾ ನೂತನ ಸಿಎಂಗೆ ಇಂದು ಅಗ್ನಿ ಪರೀಕ್ಷೆ: ಬೆಳಗ್ಗೆ 11.30ಕ್ಕೆ ವಿಶ್ವಾಸಮತ ಯಾಚನೆ

Srinivasamurthy VN
ಪಣಜಿ: ಮನೋಹರ್ ಪರಿಕ್ಕರ್ ಅವರ ಸಾವಿನ ಬೆನ್ನಲ್ಲೇ ಗೋವಾದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಮೋದ್ ಸಾವಂತ್ ಅವರಿಗೆ ಇಂದು ಮೊದಲ ಅಗ್ನಿ ಪರೀಕ್ಷೆ ಎದುರಾಗಿದ್ದು, ಬೆಳಗ್ಗೆ 11.30ಕ್ಕೆ ಗೋವಾ ವಿಧಾನಸಭೆಯಲ್ಲಿ ಅವರು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.
ಪರಿಕ್ಕರ್ ಅವರ ನಿಧನದ ಬೆನ್ನಲ್ಲೇ ಗೋವಾ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಗೋವಾ ಕಾಂಗ್ರೆಸ್ ನಿಯೋಗ ತಮಗೆ ಬಹುಮತವಿದ್ದು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೇಳಿತ್ತು, ಆದರೆ ಅಷ್ಟರಲ್ಲಾಗಲೇ ಬಿಜೆಪಿ ತನ್ನ ನೂತನ ಸಿಎಂ ಆಗಿ ಪ್ರಮೋದ್ ಸಾವಂತ್ ರನ್ನು ನೇಮಕ ಮಾಡಿ ಕಾಂಗ್ರೆಸ್ ಆಸೆಗೆ ತಣ್ಣೀರೆರಚಿತ್ತು, ಇದೀಗ ಗೋವಾ ನೂತನ ಸಿಎಂ ಪ್ರಮೋದ್ ಸಾವಂತ್ ಅವರು ವಿಶ್ವಾಸಮತದ ಮೂಲಕ ಬಹುಮತ ಸಾಬೀತುಪಡಿಸಬೇಕಿದೆ.
ಮೂಲಗಳ ಪ್ರಕಾರ ಬಿಜೆಪಿ ನೇತೃತ್ವ ಮೈತ್ರಿಕೂಟ ತಮಗೆ 21 ಶಾಸಕರ ಬೆಂಬಲವಿದೆ ಎಂದು ಘೋಷಣೆ ಮಾಡಿಕೊಂಡಿದೆ. ಅದರಂತೆ ಬಿಜೆಪಿಯ 12, ಮಿತ್ರಪಕ್ಷಗಳಾದ ಜಿಎಫ್ ಪಿ, ಎಂಜಿಪಿ ತಲಾ ಮೂರು ಶಾಸಕರು ಮತ್ತು 3 ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಿಕೊಂಡಿದೆ. ಈ ಅಂಕಿ ಸಂಖ್ಯೆಗಳು ನಿಜವೇ ಆಗಿದ್ದರೆ ಗೋವಾದಲ್ಲಿ ಬಿಜೆಪಿ ಸರ್ಕಾರ ಭದ್ರವಾಗಿರಲಿದೆ.
ಈ ಪೈಕಿ ಪಕ್ಷೇತರರು ಕೈ ಕೊಟ್ಟರೆ ಆಗ ಮತ್ತೆ ಬಿಜೆಪಿ ಸರ್ಕಾರ ಅಪಾಯದಲ್ಲಿ ಸಿಲುಕುತ್ತದೆ. ಇನ್ನು ಕಾಂಗ್ರೆಸ್ 14 ಶಾಸಕರನ್ನು ಹೊಂದಿದೆ. 
ಗೋವಾ ರಾಜ್ಯಪಾಲರಾದ ಮೃದುಲ ಸಿನ್ಹಾ ಅವರು, ಇಂದು ಬೆಳಗ್ಗೆ 11.30ಕ್ಕೆ ವಿಶೇಷ ಅಧಿವೇಶನ ಕರೆದಿದ್ದು, ವಿಧಾನಸಭೆಯಲ್ಲಿ ನೂತನ ಸಿಎಂ ಪ್ರಮೋದ್ ಸಾವಂತ್ ಬಹುಮತ ಸಾಬೀತು ಪಡಿಸಬೇಕಿದೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಇದೀಗ 36 ಮಂದಿ ಶಾಸಕರಿದ್ದು, ಸಿಎಂ ಮನೋಹರ್ ಪರಿಕ್ಕರ್ ಅವರ ಸಾವು, ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಂತೆಯೇ ಇಬ್ಬರು ಕಾಂಗ್ರೆಸ್ ಶಾಸಕರಾದ ಸುಭಾಷ್ ಶಿರೋಡ್ಕರ್ ಹಾಗೂ ದಯಾನಂದ್ ಸೊಪ್ಚೆ ಅವರೂ ಕೂಡ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಗೋವಾ ವಿಧಾನಸಭೆ ಸದಸ್ಯ ಬಲ ಇದೀಗ 36ಕ್ಕೆ ಕುಸಿದಿದ್ದು, ಬಹುಮತ ಸಾಬೀತಿಗೆ 19 ಶಾಸಕರ ಬೆಂಬಲವಿದ್ದರೆ ಸಾಕು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
SCROLL FOR NEXT