ದೇಶ

ಗೂಢಚಾರಿ ಫರ್ವೇಜ್ ಗೆ ನೆರವು ನೀಡಿದ್ದ ಪಾಕ್ ರಾಯಭಾರ ಕಚೇರಿ?

Srinivasamurthy VN
ನವದೆಹಲಿ: ಜೈಪುರದಲ್ಲಿ ಬಂಧನಕ್ಕೀಡಾಗಿರುವ ಪಾಕಿಸ್ತಾನದ ಶಂಕಿತ ಗೂಢಚಾರಿ ಮೊಹಮದ್ ಫರ್ವೇಜ್ ಗೆ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ನೆರವು ನೀಡಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಭಾರತದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಜೈಪುರದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಮೂಲದ ಮೊಹಮದ್ ಫರ್ವೇಜ್ ಗೆ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಆರ್ಥಿಕ ಮತ್ತು ಇತರೆ ನೆರವು ನೀಡುತ್ತಿದ್ದರು ಎಂಬ ಶಂಕೆಯನ್ನು ಎನ್ ಐಎ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ಅವರು, ಪ್ರಸ್ತುತ ಬಂಧನಕ್ಕೀಡಾಗಿರುವ ಶಂಕಿತ ಗೂಢಚಾರಿ ಫರ್ವೇಜ್ ಗೆ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಕೂಡ ನೆರವು ನೀಡಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಭಾರತದಿಂದ ಪಾಕಿಸ್ತಾನಕ್ಕೆ ತೆರಳುವ ನಾಗರಿಕರಿಗೆ ವೀಸಾ ನೀಡಲು ವಾರಗಟ್ಟಲೆ ಕಾಯಿಸುವ ಪಾಕಿಸ್ತಾನ ರಾಯಭಾರ ಕಚೇರಿ ಈ ಮೊಹಮದ್ ಫರ್ವೇಜ್ ಗೆ ಮಾತ್ರ ಕೆಲವೇ ಗಂಟೆಗಳಲ್ಲಿ ವೀಸಾ ನೀಡುತ್ತಿತ್ತು. ಅಲ್ಲದೆ ಈತನ ಫೋಟೋ ಗುರುತಿನ ಚೀಟಿ, ವೀಸಾ ಕ್ರಿಯೆಗಳಲ್ಲೆವನ್ನೂ ರಾಯಭಾರ ಕಚೇರಿಯೇ ನೋಡಿಕೊಳ್ಳುತ್ತಿತ್ತು. ಅಲ್ಲದೆ ಆತನಿಗೆ ಪಾಕ್ ರಾಯಭಾರ ಕಚೇರಿಯೇ ಸಿಮ್ ಕಾರ್ಡ್ ವ್ಯವಸ್ಥೆ ಕೂಡ ಮಾಡಿತ್ತು. ಇದೂ ಅಧಿಕಾರಿಗಳಿಗೆ ಶಂಕೆ ಮೂಡಿಸಿತ್ತು ಎಂದು ಹೇಳಿದ್ದಾರೆ.
ಅಲ್ಲದೆ ಫರ್ವೇಜ್ ಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಆರ್ಥಿಕ ನೆರವು ನೀಡುತ್ತಿತ್ತು  ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅಂತೆಯೇ ವಿಚಾರಣೆ ವೇಳೆ ಆತ ಕೂಡ ತಾನು ಪಾಕಿಸ್ತಾನ ಗೂಢಚಾರಿ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
SCROLL FOR NEXT