ದೇಶ

17 ಬಾರಿ ಪಾಕ್ ಗೆ ಹೋಗಿದ್ದೆ'; ಜೈಪುರದಲ್ಲಿ ಶಂಕಿತ ಐಎಸ್ಐ ಗೂಢಚಾರಿ ಬಂಧನ!

Srinivasamurthy VN
ಜೈಪುರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜೈಪುರದಲ್ಲಿ ಶಂಕಿತ ಗೂಢಚಾರಿಯನ್ನು ಬಂಧಿಸಲಾಗಿದೆ.
ದೆಹಲಿ ಮೂಲದ ಸುಮಾರು 42 ವರ್ಷದ ಮೊಹಮದ್ ಫರ್ವೇಜ್ ಎಂಬಾತನ್ನು ರಾಜಸ್ಥಾನ ಪೊಲೀಸರು ಸೋಮವಾರ ಬಂಧಿಸಿದ್ದು, ಈತ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಬಂಧಿತ ಶಂಕಿತ ಗೂಢಚಾರಿಯನ್ನು ಎನ್ಐಎ ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದಿದ್ದು, ಆತನ ವಿರುದ್ಧ ರಾಷ್ಟ್ರ ವಿರೋಧಿ ಚಟುವಟಿಕೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಈ ಹಿಂದೆಯೂ ಕೂಡ ಇದೇ ಮೊಹಮದ್ ಫರ್ವೇಜ್ ನನ್ನು 2017ರಲ್ಲಿ ಎನ್ ಐಎ ಅಧಿಕಾರಿಗಳು ರಾಷ್ಟ್ರದ್ರೋಹಿ ಚುಟವಟಿಕೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧಿಸಿದ್ದರು ಎನ್ನಲಾಗಿದೆ. ಇದೀಗ ಜೈಪುರಕ್ಕೆ ಈತನನ್ನು ವಿಚಾರಣೆಗೆ ಕರೆತಂದಿದ್ದು ಈ ವೇಳೆ ಈತ ತಾನು 17ಕ್ಕೂ ಹೆಚ್ಚು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದೇನೆ ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ ಎಂದು ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ.
ಅಂತೆಯೇ ಇದೇ ಮೊಹಮದ್ ಫರ್ವೇಜ್ ಈ ಹಿಂದೆ ಸೈನಿಕರನ್ನು ಹನಿಟ್ರ್ಯಾಪ್ ಮಾಡಿ ರಹಸ್ಯ ಮಾಹಿತಿಗಳನ್ನು ಪಡೆದಿರುವ ಶಂಕೆ ಕೂಡ ಅಧಿಕಾರಿಗಳಿಗೆ ವ್ಯಕ್ತವಾಗಿದೆ. ಸೇನೆಯ ನಕಲಿ ಗುರುತಿನ ಚೀಟಿ ಮೂಲಕ ಸೇನೆಯ ರಹಸ್ಯ ದಾಖಲೆಗಳಲ್ಲಿನ ಅಂಶಗಳನ್ನು ಕಲೆಹಾಕಿ ಅದನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. 
SCROLL FOR NEXT