ನವದೆಹಲಿ: ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿಯು ಸೇವೆಯಿಂದ ಸ್ಥಗಿತಗೊಂಡಿದ್ದ ಉಪಗ್ರಹವನ್ನು ಹೊಡೆದುರುಳಿಸಿದ್ದಕ್ಕೆ ಸಂಬಂಧಿಸಿದಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಎ-ಸ್ಯಾಟ್ ಮಿಸೈಲ್ ಪರೀಕ್ಷೆಗೆ ಹಿಂದಿನ ಯುಪಿಎ ಸರ್ಕಾರ ಅನುಮತಿ ನೀಡಿರಲಿಲ್ಲ ಎಂದು ಡಿಆರ್‌ಡಿಓ ಮಾಜಿ ಮುಖ್ಯಸ್ಥ ಡಾ. ವಿ.ಕೆ ಸಾರಸ್ವತ್ ಹೇಳಿದ್ದಾರೆ.
2012ರಲ್ಲೇ ಡಿಆರ್‌ಡಿಓ ಎ-ಸ್ಯಾಟ್ ಮಿಸೈಲ್ ಪರೀಕ್ಷೆಗೆ ಅನುಮತಿ ಕೋರಿತ್ತು. ಆದರೆ ದುರದೃಷ್ಟವಶಾತ್ ಅದು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಈಗಿನ ಸರ್ಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಡಿಆರ್‌ಡಿಓ ಮತ್ತೆ ಪ್ರಸ್ತಾಪಿಸಿದಾಗ ಕೂಡಲೇ ಯೋಜನೆ ಮುಂದುವರಿಸುವಂತೆ ಅನುಮತಿ ನೀಡಿದರು. ಅವರು ಪ್ರದರ್ಶಿಸಿದ ಧೈರ್ಯವನ್ನು ಹಿಂದಿನ ಸರಕಾರವೇ ಪ್ರದರ್ಶಿಸಿದ್ದರೆ ಬಹುಶಃ 2014-15ರಲ್ಲೇ ಈ ಪರೀಕ್ಷೆ ನಡೆದಿರುತ್ತಿತ್ತು' ಎಂದು ಡಾ. ಸಾರಸ್ವತ್ ತಿಳಿಸಿದ್ದಾರೆ.
ಬಹುಶಃ ಆಗಿನ ಯುಪಿಎ ಸರ್ಕಾರಕ್ಕಿದ್ದ 'ಭಯದ ಮನಸ್ಥಿತಿ'ಯೇ ಅನುಮತಿ ನೀಡುವುದಕ್ಕೆ ಅಡ್ಡಿಯಾಗಿರಬಹುದು. ಹಾಗಾಗಿಯೇ ಮನಮೋಹನ್ ಸಿಂಗ್ ಸರ್ಕಾರ ಕ್ಷಿಪಣಿ ಪರೀಕ್ಷೆಗೆ ಅನುಮತಿ ನೀಡದೆ ಇದ್ದಿರಬಹುದು ಎಂದು ಸಾರಸ್ವತ್ ವಿವರಿಸಿದ್ದಾರೆ.
'ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರತಿಯೊಂದು ಪ್ರಯೋಗಕ್ಕೂ ಎರಡು ಹಂತಗಳಿವೆ. ಮೊದಲ ಹಂತ ಸಿಮ್ಯುಲೇಶನ್. ಅದನ್ನು 2012ರಲ್ಲೇ ನಡೆಸಲಾಗಿತ್ತು. ಅದನ್ನೇ ಆಧರಿಸಿ ನೈಜ ಉಪಗ್ರಹ ನಾಶಕ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ' ಎಂದು ಸಾರಸ್ವತ್ ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಯಾವ ದಿನಾಂಕದಂದು ಈ ಪರೀಕ್ಷೆಗೆ ಅನುಮತಿ ನೀಡಿತ್ತು ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ಒಂದು ವರ್ಷಕ್ಕೂ ಹಿಂದೆಯೇ ಅನುಮತಿ ನೀಡಿರಬಹುದು. ಈಗ ಪರೀಕ್ಷೆ ನಡೆಸಬೇಕಿದ್ದರೆ ಅಷ್ಟು ದೀರ್ಘಕಾಲದ ಸಿದ್ಧತೆ ಬೇಕಾಗುತ್ತದೆ ಎಂದು ಡಿಆರ್ ಡಿಒ ಮಾಜಿ ಮುಖ್ಯಸ್ಥರು ತಿಳಿಸಿದ್ದಾರೆ.
ಕಳೆದ ಜನವರಿ 24ರಂದು ಇಸ್ರೋ ಉಡಾಯಿಸಿದ್ದ ಮೈಕ್ರೋ ಸ್ಯಾಟೆಲೈಟ್ ಅನ್ನು ಇಂದು ಎ-ಸ್ಯಾಟ್ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿ ಹೊಡೆದುರುಳಿಸಿದೆ. ಇಂದು ಬೆಳಗ್ಗೆ 11.16ಕ್ಕೆ ಎ-ಸ್ಯಾಟ್ ಮಿಸೈಲ್ ಅನ್ನು ಉಡಾಯಿಸಲಾಗಿದ್ದು, ಭೂಕಕ್ಷೆಯಿಂದ ಸುಮಾರು 300 ಕಿ.ಮೀ ದೂರದಲ್ಲಿ ಲೋ ಅರ್ಥ್ ಆರ್ಬಿಟ್ (ಭೂ ಕೆಳ ಕಕ್ಷೆ)ಯಲ್ಲಿದ್ದ ಸಕ್ರಿಯ ಉಪಗ್ರಹವನ್ನು ಎ-ಸ್ಯಾಟ್ ಮಿಸೈಲ್ ಹೊಡೆದುರುಳಿಸಿದೆ. ಈ ಕಾರ್ಯಕ್ಕೆ ಎ-ಸ್ಯಾಟ್ ಮಿಸೈಲ್ ತೆಗೆದುಕೊಂಡಿದ್ದು ಕೇವಲ 3 ನಿಮಿಷಗಳ ಅವಧಿಯಷ್ಟೇ.. ಈ ಕಾರ್ಯದ ಸಮಯ ಚಿಕ್ಕದಾದರೂ ಈ ಕಾರ್ಯ ಅತ್ಯಂತ ಕ್ಲಿಷ್ಟಕರವಾದದ್ದು ಎಂದು ಡಿಆರ್ ಡಿಒ ಅಧ್ಯಕ್ಷ ಜಿ ಸತೀಶ್ ರೆಡ್ಡಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos