ದೇಶ

ಹಿಂದೂ ಭಯೋತ್ಪಾದನೆ ಆರೋಪ: ಕಾಂಗ್ರೆಸ್ ನಿಂದ ಕ್ಷಮೆ ಯಾಚನೆಗೆ ಜೇಟ್ಲಿ ಪಟ್ಟು!

Srinivas Rao BV
ನವದೆಹಲಿ: ಹಿಂದೂ ಭಯೋತ್ಪಾದನೆ ಎಂಬ ಹೊಸ ಸಿದ್ಧಾಂತವನ್ನು ಮಂಡಿಸಿದ್ದ ಕಾಂಗ್ರೆಸ್ ಸಮಾಜದ ಕ್ಷಮೆ ಯಾಚಿಸಬೇಕೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ಮಾ.29 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅರುಣ್ ಜೇಟ್ಲಿ, ಸಂಜೋತಾ ಸ್ಫೋಟ ಪ್ರಕರಣದಲ್ಲಿ ಕೋರ್ಟ್ ನೀಡಿರುವ ತೀರ್ಪನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕ್ಷಮೆಗೆ ಒತ್ತಾಯಿಸಿದ್ದಾರೆ. ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿದಂತೆ ಹಲವರು ಆರೋಪಿಗಳಾಗಿದ್ದರು. ಈ ಘಟನೆ ಸಂಭವಿಸಿದಾಗ ಕಾಂಗ್ರೆಸ್ ಹಿಂದೂ ಭಯೋತ್ಪಾದನೆ ಎಂಬ ಆರೋಪ ಮಾಡಿತ್ತು. 
ಈಗ ಪ್ರಕರಣದ ಪ್ರಮುಖ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ ಹಿಂದೂ ಭಯೋತ್ಪಾದನೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಸಮಾಜದ ಕ್ಷಮೆ ಯಾಚಿಸಬೇಕೆಂದು  ಜೇಟ್ಲಿ ಆಗ್ರಹಿಸಿದ್ದಾರೆ. 
2007 ರ ಸಂಜೋತಾ ಸ್ಫೋಟ ಪ್ರಕರಣದಲ್ಲಿ ಪಂಚಕುಲ ಕೋರ್ಟ್ ತೀರ್ಪು ಪ್ರಕಟಿಸಿದೆ. 2007 ರಿಂದ ಘಟನೆಗೆ ಸಂಬಂಧಪಟ್ಟ ನಿಜವಾದ ಭಯೋತ್ಪಾದಕರ ಕುರಿತು ಅಮೆರಿಕಾ ನಿರಂತರವಾಗಿ ಮಾಹಿತಿ ನೀಡಿದೆ ಎಂಬುದು ಸ್ಪಷ್ಟವಾಗಿದೆ. ನೈಜ ಭಯೋತ್ಪಾದಕರ ಸುಳಿವಿನ ಆಧಾರದಲ್ಲಿ ತನಿಖೆ ನಡೆಸುವುದರ ಬದಲು ಕಾಂಗ್ರೆಸ್ ಓಟ್ ಬ್ಯಾಂಕ್ ಗಾಗಿ ಸುಳ್ಳು ಸಾಕ್ಷ್ಯಗಳನ್ನು ಮುಂದಿಟ್ಟು ಹಿಂದೂ ಭಯೋತ್ಪಾದನೆ ಎಂಬ ಹೊಸ ವ್ಯಾಖ್ಯಾನವನ್ನು ಮುಂದಿಟ್ಟಿತ್ತು ಎಂದು ಜೇಟ್ಲಿ ಆರೋಪಿಸಿದ್ದಾರೆ. 
ಹಿಂದೂಗಳನ್ನು ಭಯೋತ್ಪಾದಕರು ಎಂದು ನಂಬಿದ್ದ ಜನರು ಈಗ ಅದೇ ಧರ್ಮದೆಡೆಗೆ ಗೌರವ ತೋರುವುದರಲ್ಲಿ ವ್ಯಸ್ತರಾಗಿದ್ದಾರೆ, ಹಿಂದೂಗಳನ್ನು ಭಯೋತ್ಪಾದಕರೆಂದು ಕರೆದಿದ್ದನ್ನು ಜನರು ಎಂದಿಗೂ ಸಹಿಸುವುದಿಲ್ಲ, ಕಾಂಗ್ರೆಸ್ ಹಿಂದೂ ಸಮಾಜಕ್ಕೆ ಅವಮಾನ ಮಾಡಿದೆ, ಹಿಂದೂ ಭಯೋತ್ಪಾದನೆ ಎಂಬ ಆರೋಪಕ್ಕೆ ಕಾಂಗ್ರೆಸ್ ಕಾರಣ, ಕಾಂಗ್ರೆಸ್ ಜನತೆಯ ಕ್ಷಮೆ ಕೇಳಬೇಕೆಂದು ಜೇಟ್ಲಿ ಆಗ್ರಹಿಸಿದ್ದಾರೆ. 
ಇದೇ ವೇಳೆ ಪ್ರಿಯಾಂಕ ವಾಧ್ರ ಅಯೋಧ್ಯೆ ಭೇಟಿ ಬಗ್ಗೆಯೂ ಮಾತನಾಡಿರುವ ಜೇಟ್ಲಿ, ಅಯೋಧ್ಯೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡುತ್ತಿರುವುದು ಒಳ್ಳೆಯದು ಅದು ರಾಮಜನ್ಮಭೂಮಿ ಎಂದು ಅವರು ಅಂಗೀಕರಿಸಬೇಕೆಂದು ಹೇಳಿದ್ದಾರೆ. 
SCROLL FOR NEXT