ಜಮ್ಮು- ಕಾಶ್ಮೀರ: ಪೊಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದಾಗಿ ನಾಗರಿಕರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನ ಸೈನಿಕರು ನಡೆಸಿದ ಮೊರ್ಟರ್ ಶೆಲ್ ದಾಳಿಯಿಂದಾಗಿ ಮ್ಯಾನ್ ಕೊಟ್ ಸೆಕ್ಟರ್ ನಲ್ಲಿನ ನಾರಾಲಾ ಗ್ರಾಮದ ಮೊಹಮ್ಮದ್ ಮುಸ್ತಕ್ ಎಂಬವರು ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮ್ಯಾನ್ ಕೋಟ್ ಹಾಗೂ ಕೃಷ್ಣ ಘಾಟಿ ಸೆಕ್ಟರ್ ನಲ್ಲಿ ಪಾಕಿಸ್ತಾನಿ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ .ಭಾರತೀಯ ಸೈನಿಕರು ಕೂಡಾ ಪ್ರತಿದಾಳಿ ನಡೆಸಿದ್ದು, ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಬಾಲಕೋಟ್ ನಲ್ಲಿ ಫೆಬ್ರವರಿ 26 ರಂದು ವಾಯುದಾಳಿ ನಡೆಸಿದ ನಂತರ ಪೊಂಚ್ ಹಾಗೂ ರಜೌರಿ ಜಿಲ್ಲೆಯಲ್ಲಿ ಮೂವರು ಸೈನಿಕರು ಸೇರಿದಂತೆ ಏಳು ಮಂದಿ ಮೃತ್ತಪಟ್ಟಿದ್ದಾರೆ