ದೇಶ

ಬಿಜೆಪಿ ತಲಾ 10 ಕೋಟಿ ರು. ಕೊಟ್ಟು ಏಳು ಆಪ್ ಶಾಸಕರ ಖರೀದಿಗೆ ಯತ್ನ: ಮನಿಶ್ ಸಿಸೋಡಿಯಾ

Lingaraj Badiger
ನವದೆಹಲಿ: ಬಿಜೆಪಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಆರೋಪಿಸಿರುವ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು, ತಲಾ 10 ಕೋಟಿ ರುಪಾಯಿ ನೀಡಿ ಏಳು ಎಎಪಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದು ಬುಧವಾರ ಹೇಳಿದ್ದಾರೆ.
ಬಿಜೆಪಿ ಈ ಹಿಂದೆಯೂ ನಮ್ಮ ಶಾಸಕರ ಖರೀದಿಗೆ ಯತ್ನಿಸಿತ್ತು. ಆದರೆ ಜನ ಅವರಿಗೆ ಸರಿಯಾದ ಉತ್ತರ ನೀಡಿದ್ದರು. ಈಗ ಮತ್ತೆ ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂದು ದೆಹಲಿ ಡಿಸಿಎಂ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಬಳಿ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಇಲ್ಲ. ಹೀಗಾಗಿ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಸಿಸೋಡಿಯಾ ದೂರಿದ್ದಾರೆ.
ಇದೇ ವೇಳೆ, 40 ಟಿಎಂಸಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಆಪ್ ನಾಯಕ, ಇದು ಪ್ರಜಾಪ್ರಭುತ್ವ ದೇಶ ಮತ್ತು ಪ್ರಜಾಪ್ರಭುತ್ವದಿಂದಲೇ ತಾವು ಪ್ರಧಾನಿಯಾಗಿದ್ದಾರೆ ಎಂಬುದನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇನ್ನು ಸಿಸೋಡಿಯಾ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಿಜೆಪಿ, ಇದೊಂದು ಆಧಾರ ರಹಿತ ಆರೋಪ ಮತ್ತು ಜನರ ಗಮನ ಬೇರೆಡೆ ಸೆಳೆಯುವ ಯತ್ನ ಎಂದಿದೆ.
SCROLL FOR NEXT