ದೇಶ

ಒಡಿಶಾದತ್ತ ಫೊನಿ ಚಂಡಮಾರುತ, ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ, ಭುವನೇಶ್ವರ ವಿಮಾನ ನಿಲ್ದಾಣ ಬಂದ್!

Srinivasamurthy VN
ಭುವನೇಶ್ವರ: ಪಂಚರಾಜ್ಯಗಳಲ್ಲಿ ಆತಂಕ ಸೃಷ್ಟಿ ಮಾಡಿರುವ ಫೊನಿ ಚಂಡಮಾರುತ ಇನ್ನು ಕೆಲವೇ ಕ್ಷಣಗಳಲ್ಲಿ ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಲಿದ್ದು, ಈಗಾಗಲೇ ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ಪ್ರಮಾಣದ ಗಾಳಿ ಸಹಿತ ಮಳೆ ಸುರಿಯುತ್ತಿದೆ.
ಹವಾಮಾನ ಇಲಾಖೆ ಮೂಲಗಳು ತಿಳಿಸಿರುವಂತೆ ಫೊನಿ ಚಂಡಮಾರುತ ಇಂದು ಬೆಳಗ್ಗೆ 9.30ರ ಸುಮಾರಿಗೆ ಪುರಿ ಸಮೀಪದ ಕರಾವಳಿ ತೀರವನ್ನು ಪ್ರವೇಶಿಸಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಒಡಿಶಾ ರಾಜಧಾನಿ ಭುವನೇಶ್ವರದ ಅಂತಾರಾಷ್ಟ್ರ್ಯೀ ವಿಮಾನ ನಿಲ್ದಾಣದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಎಲ್ಲ ವಿಮಾನಗಳ ಹಾರಾಟ ಬಂದ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಒಡಿಶಾದ 15 ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಇಲ್ಲಿಯವರೆಗೂ 8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಒಡಿಶಾದ ಕರಾವಳಿ ತೀರ ಪ್ರದೇಶಗಳಲ್ಲಿನ ಶಾಲೆ–ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಫೊನಿ ಚಂಡಮಾರುತ 180 ರಿಂದ 200 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲೂ ಇದರ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ, ಶ್ರೀಕಾಕುಳಂ ಕರಾವಳಿ ಪ್ರದೇಶದ ಮೇಲೂ ಫೊನಿ  ಚಂಡಮಾರುತ ಪರಿಣಾಮ ಬೀರಿದ್ದು, ಇಲ್ಲಿಯೂ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಕರಾವಳಿ ಪ್ರಾಂತ್ಯದ ಸುತ್ತ ಮುತ್ತಲಿನ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಇದಲ್ಲದೆ ಪಶ್ಚಿಮ ಬಂಗಾಳಕ್ಕೂ ಫೊನಿ ಚಂಡಮಾರುತದ ಬಿಸಿ ತಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಶನಿವಾರ ಕೋಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ವಿಶೇಷ ಪರಿಹಾರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SCROLL FOR NEXT