ದೇಶ

ಫೊನಿ ಚಂಡಮಾರುತ: ಒಡಿಶಾದಲ್ಲಿ 11 ಲಕ್ಷ ಮಂದಿಯ ಸ್ಥಳಾಂತರ, ಸಮರೋಪಾದಿಯ ರಕ್ಷಣಾ ಕಾರ್ಯಾಚರಣೆ!

Srinivasamurthy VN
ಭುವನೇಶ್ವರ: ಐದು ರಾಜ್ಯಗಳಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿರುವ ಫೊನಿ ಚಂಡಮಾರುತ ಇನ್ನು ಕೆಲವೇ ಕ್ಷಣಗಳಲ್ಲಿ ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಕಡಲ ತೀರದಲ್ಲಿನ ಸುಮಾರು 11 ಲಕ್ಷ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.
ಒಡಿಶಾಗೆ ಸಂಬಂಧಿಸಿದಂತೆ ಕಳೆದ 2 ದಶಕಗಳಲ್ಲಿಯೇ ಇಂತಹುದೊಂದು ಪ್ರಬಲ ಮತ್ತು ಭೀಕರ ಚಂಡಮಾರುತ ಅಪ್ಪಳಿಸರಲಿಲ್ಲ. ಇದೇ ಕಾರಣಕ್ಕೆ ಇಲ್ಲಿ ಸಂಭಾವ್ಯ ಜೀವ ಹಾನಿ ತಪ್ಪಿಸಲು, ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಮೂರು ದಿನಗಳ ಅವಧಿಯಲ್ಲಿ ಬರೊಬ್ಬರಿ ಸುಮಾರು 11 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ.
ಒಡಿಶಾದ ಇತಿಹಾಸದಲ್ಲಿ ಹಾಲಿ ರಕ್ಷಣಾ ಕಾರ್ಯಾಚರಣೆ ಅತ್ಯಂತ ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ಎಂದು ಹೇಳಲಾಗುತ್ತಿದ್ದು, ಲಕ್ಷಾಂತರ ರಕ್ಷಣಾ ಸಿಬ್ಬಂದಿ ಏಕಕಾಲಕ್ಕೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಚಂಡಮಾರುತ ಪೀಡಿತ ರಾಜ್ಯಗಳಿಗೆ ಕೇಂದ್ರ ವಿಪತ್ತು ನಿರ್ವಹಣಾ ದಳಗಳನ್ನು ರವಾನೆ ಮಾಡಿದ್ದು, ಒಡಿಶಾಕ್ಕೆ 28, ಆಂಧ್ರ ಪ್ರಗದೇಶಕ್ಕೆ 12 ಹಾಗೂ ಪಶ್ಚಿಮ ಬಂಗಾಳಕ್ಕೆ 6 ಎನ್‌ ಡಿಆರ್‌ಎಫ್‌ ತಂಡಗಳ ರವಾನೆ ಮಾಡಿದೆ.
ಅಂತೆಯೇ ಒಡಿಶಾದ 11 ಜಿಲ್ಲೆಗಳಲ್ಲಿ 880ಕ್ಕೂ ಹೆಚ್ಚು ನಿರಾಶ್ರಿತ ಶಿಬಿರಗಳ ಸ್ಥಾಪನೆ ಮಾಡಲಾಗಿದ್ದು, ಲಕ್ಷಾಂತರ ಜನರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರ ರಕ್ಷಣೆಗೆ ನೌಕಾಪಡೆ, ಸೇನೆಯ ಹೆಲಿಕಾಪ್ಟರ್‌ ಗಳು, ನೌಕಾಪಡೆಯ ನೌಕೆಗಳನ್ನು ನಿಯೋಜನೆ ಮಾಡಲಾಗಿದ್ದು, ನೌಕೆಗಳು ಸರ್ವಸನ್ನದ್ಧ ಸ್ಥಿತಿಯಲ್ಲಿವೆ. ಅಂತೆಯೇ ಪರಿಹಾರ ಸಾಮಗ್ರಿ ವಿತರಣೆಗೆ 2 ಚೇತಕ್‌ ಕಾಪ್ಟರ್‌ ಗಳನ್ನೂ ನಿಯೋಜಿಸಲಾಗಿದೆ. ಭುವನೇಶ್ವರದ ರೆಡ್‌ ಕ್ರಾಸ್‌ ಭವನದಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹಿಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಒಎನ್‌ಜಿಸಿಯಿಂದ ಬಂಗಾಳಕೊಲ್ಲಿಯಲ್ಲಿರುವ ತೈಲ ಘಟಕಗಳಿಂದ 500 ಸಿಬ್ಬಂದಿಯ ಸ್ಥಳಾಂತರಿಸಲಾಗಿದೆ
3 ಹಡಗುಗಳ ನಿಯೋಜನೆ 
ಭಾರತೀಯ ವಾಯುಪಡೆಯು ಮೂರು ಹಡಗುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಸಹ್ಯಾದ್ರಿ, ರಣವೀರ್‌ ಮತ್ತು ಕದ್ಮಾಟ್‌ ಹಡಗುಗಳನ್ನು ಅಗತ್ಯ ಪರಿಹಾರ ಸಾಮಗ್ರಿ, ಔಷಧಗಳು ಮತ್ತು ವೈದ್ಯಕೀಯ ತಂಡಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಇದರ ಜತೆಗೆ ವಾಯುಪಡೆಯ ಚೇತಕ್ ಹೆಲಿಕಾಪ್ಟರ್‌ ಗಳನ್ನೂ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.  ಅಗತ್ಯಬಿದ್ದಾಗ ಅವು ಕಾರ್ಯಾಚರಣೆಗೆ ನೆರವು ನೀಡಲಿವೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
SCROLL FOR NEXT