ಮುಂಬೈ: ಗುರುವನ್ನು ದೇವಾನೂ ದೇವತೆಗಳಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ 56 ವರ್ಷದ ಕಾಮುಕ ಶಿಕ್ಷಕನೊಬ್ಬ ಸತತ ಮೂರು ವರ್ಷಗಳಿಂದ15 ವರ್ಷದ ವಿದ್ಯಾರ್ಥಿನಿಯನ್ನು ನಿರಂತರ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಮಾನ ಹರಾಜು ಹಾಕಲು ಹೋಗಿ ಕೊನೆಗೆ ತಾನೇ ತೊಡಿದ ಹಳ್ಳಕ್ಕೆ ಬಿದ್ದಿದ್ದಾನೆ.
ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯ ಬೆತ್ತಲೆ ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಆಕೆಯನ್ನು ಶಿಕ್ಷಕನೊಬ್ಬ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ಸತತ ಮೂರು ವರ್ಷಗಳ ಅತ್ಯಚಾರದ ಬಳಿಕ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಮುಗಿಸಿದ ಕೂಡಲೇ ಶಾಲೆಯನ್ನು ತೊರೆದಳು.
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿ ಕಾಲೇಜು ಸೇರಿದಳು. ಇನ್ನು ಅಲ್ಲಿಗೆ ಬಂದ ಶಿಕ್ಷಕ ಕಾಲೇಜಿನ ಮ್ಯಾನೇಜ್ ಮೆಂಟ್ ಬಳಿ ಈ ವಿದ್ಯಾರ್ಥಿನಿಯ ಕ್ಯಾರೆಕ್ಟರ್ ಸರಿಯಿಲ್ಲ. ಆಕೆಗೆ ಟಿಸಿ ಕೊಟ್ಟು ಕಳುಹಿಸಿಬಿಡಿ ಎಂದು ಹೇಳಿದ್ದಾನೆ. ಇದಕ್ಕೆ ಹೆದರಿ ಕಾಲೇಜು ಮಾರ್ಯಾದೆ ಹೋಗಲಿದೆ ಎಂದು ಮ್ಯಾನೇಜ್ ಮೆಂಟ್ ಆಕೆಗೆ ಟಿಸಿ ಕೊಟ್ಟು ಕಳುಹಿಸಿದೆ.
ಟಿಸಿ ಪಡೆದ ವಿದ್ಯಾರ್ಥಿನಿ ಮುಂದೆ ಮತ್ತೊಂದು ಕಾಲೇಜಿಗೆ ಸೇರಿದ್ದಾಳೆ. ಅಲ್ಲಿಗೂ ಬಂದ ಕಾಮುಕ ಶಿಕ್ಷಕ ಆಕೆಯ ವಿರುದ್ಧ ಮಾತುಗಳನ್ನು ಆಡಿದ್ದಾನೆ. ಇದಕ್ಕೆ ಕಾಲೇಜು ಮ್ಯಾನೇಜ್ ಮೆಂಟ್ ನೀವು ಆಕೆಗೆ ಏನಾಗಬೇಕು ಎಂದು ಕೇಳಿದಾಗ ನಾನು ಆಕೆಯ ಅಂಕಲ್ ಅಂತ ಹೇಳಿ ಹೋಗಿದ್ದಾನೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾನೇಜ್ ಮೆಂಟ್ ನವರು ವಿದ್ಯಾರ್ಥಿನಿ ಪೋಷಕರನ್ನು ಕರೆದು ಕೇಳಿದ್ದಾರೆ. ಅದಕ್ಕೆ ಪೋಷಕರು ಆತ ಯಾರು ಅಂತ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಮ್ಯಾನೇಜ್ ಮೆಂಟ್ ನವರು ವಿದ್ಯಾರ್ಥಿನಿಗೆ ಧೈರ್ಯ ತುಂಬಿ ನಿನ್ನ ಬೆನ್ನಿಗೆ ನಾವಿದ್ದೇವೆ ಏನಾಯಿತು ಎಂದು ಕೇಳಿದಾಗ ವಿದ್ಯಾರ್ಥಿನಿ ನಡೆದ ವಿಷಯವನ್ನೆಲ್ಲ ತಿಳಿಸಿದ್ದಾಳೆ. ಕೂಡಲೇ ಮ್ಯಾನೇಜ್ ಮೆಂಟ್ ನವರು ಪೊಲೀಸರಿಗೆ ದೂರು ನೀಡಿದ್ದು ಈ ಸಂಬಂಧ ಪೊಲೀಸರು ಕಾಮುಕ ಶಿಕ್ಷಕನನ್ನು ಬಂಧಿಸಿದ್ದಾರೆ.