ದೇಶ

ಫೋನಿ ಚಂಡಮಾರುತ; ಭಾರತದ ಕಾರ್ಯಕ್ಕೆ ಭೇಷ್‌ ಎಂದ ವಿಶ್ವಸಂಸ್ಥೆ

Srinivasamurthy VN
ವಾಷಿಂಗ್ಟನ್: ಫೋನಿ ಚಂಡಮಾರುತ ಅಬ್ಬರಿಸುತ್ತಿರುವಂತೆಯೇ ಚಂಡಮಾರುತ ಸಂಬಂಧ ಭಾರತ ಕೈಗೊಂಡ ಸೂಕ್ತ ಮುಂಜಾಗ್ರತಾ ಕ್ರಮಗಳು ವಿಶ್ವಸಂಸ್ಥೆಯ ಗಮನ ಸೆಳೆದಿದ್ದು, ಭಾರತ ಕಾರ್ಯಕ್ಕೆ ವಿಶ್ವಸಂಸ್ಥೆ ಭೇಷ್ ಎಂದಿದೆ.
ಹೌದು.. ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಬ್ಬರಿಸುತ್ತಿರುವ ಫೋನಿ ಚಂಡಮಾರುತ ಕಳೆದ ಮೂರು ದಿನಗಳಿಂದ ಭಾರತದ ಒಡಿಶಾ, ಪಶ್ಚಿಮ ಬಂಗಾಶ ಮತ್ತು ಆಂಧ್ರ ಪ್ರದೇಶದಲ್ಲಿ ಅಬ್ಬರಿಸಿತ್ತು. ಆದರೆ ಭಾರತ ಮತ್ತು ಚಂಡಮಾರುತ ಪೀಡಿತ ರಾಜ್ಯಗಳು ಕೈಗೊಂಡ ಸೂಕ್ತ ಮುಂಜಾಗ್ರತಾ ಕ್ರಮಗಳಿಂದಾಗಿ ಭಾರತದಲ್ಲಿ ಪ್ರಾಣಹಾನಿ ಕಡಿಮೆಯಾಗಿತ್ತು. ಇದೇ ಕಾರಣಕ್ಕಾಗಿ ಇದೀಗ ವಿಶ್ವಸಂಸ್ಥೆ ಭಾರತವನ್ನು ಶ್ಲಾಘಿಸಿದೆ.
ಸೂಕ್ತ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಪ್ರಾಣಹಾನಿ ಕಡಿಮೆ ಮಾಡಿದ್ದಕ್ಕಾಗಿ ವಿಶ್ವಸಂಸ್ಥೆಯು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕಳೆದ 20 ವರ್ಷಗಳಲ್ಲೇ ಅತ್ಯಂತ ತೀವ್ರ ಎನ್ನಲಾದ ಫೊನಿ ಚಂಡಮಾರುತದ ಬಗ್ಗೆ ಹವಮಾನ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದರೆ, ಸಾವಿರಾರು ಮಂದಿ ಬಲಿಯಾಗುವ ಸಾಧ್ಯತೆಯಿತ್ತು. ಆದರೆ, ವಿಶ್ವಸಂಸ್ಥೆಯ ವಿಪತ್ತು ನಿರ್ವಹಣಾ ನಿಯಮಗಳನ್ನು ಅನುಸರಿಸುವ ಮೂಲಕ ಸರ್ಕಾರಗಳು ಭಾರಿ ಅನಾಹುತ ತಪ್ಪಿಸಿವೆ ಎಂದು ವಿಶ್ವಸಂಸ್ಥೆ ಹೇಳಿದೆ. 
ಅತ್ಯಂತ ಕ್ಲಿಷ್ಟಕರ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಭಾರತದ ಶೂನ್ಯ ಸಾವು-ನೋವು ವಿಧಾನವನ್ನು ವಿಶ್ವಸಂಸ್ಥೆ ಶ್ವಾಘಿಸುತ್ತದೆ. ಭಾರತ ಸೂಕ್ತ ಮುಂಜಾಗ್ರತಾ ಕ್ರಮಕೈಗೊಂಡಿದ್ದರಿಂದ ವಿಷಮ ಪರಿಸ್ಥಿಯಲ್ಲೂ ಅತ್ಯಂತ ಕಡಿಮೆ ಸಾವುನೋವು ಸಂಭವಿಸಿದೆ. ಖಂಡಿತ ಭಾರತದ ಕಾರ್ಯ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗ ಸಾಮಾನ್ಯ ಕಾರ್ಯದರ್ಶಿ ಮಾಮಿ ಮಿಜುಟೋರಿ ಹೇಳಿದ್ದಾರೆ.
SCROLL FOR NEXT