ದೇಶ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಜೆಐಗೆ ಕ್ಲೀನ್ ಚಿಟ್: ತನಿಖಾ ವರದಿ ಕೇಳಿದ ದೂರುದಾರ ಮಹಿಳೆ

Lingaraj Badiger
ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಸರ್ವೋಚ್ಚ ನ್ಯಾಯಾಲಯದ ಆಂತರಿಕ ಸಮಿತಿ ಕ್ಲೀನ್‌ಚಿಟ್‌ ನೀಡಿದೆ. ಇದರಿಂದ ಆಘಾತಗೊಂಡ ದೂರುದಾರ ಮಹಿಳೆ ತನಿಖಾ ವರದಿಯ ಒಂದು ಪ್ರತಿ ತನಗೆ ನೀಡುವಂತೆ ಸಮಿತಿಗೆ ಮನವಿ ಮಾಡಿದ್ದಾರೆ.
ಸಿಜೆಐಗೆ ಆಂತರಿಕ ಸಮಿತಿ ಕ್ಲೀನ್ ಚಿಟ್ ನೀಡರುವುದು ನನಗೆ ಆಘಾತ ಉಂಟು ಮಾಡಿದೆ ಎಂದಿರುವ ಮಹಿಳೆ, ಯಾವಾ ಆಧಾರದ ಮೇಲೆ ನನ್ನ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ವರದಿ ನೀಡಿದ್ದಾರೆ ಎಂಬುದುನ್ನು ತಿಳಿದುಕೊಳ್ಳುವ ಹಕ್ಕು ನನಗೆ ಇದೆ ಎಂದಿದ್ದಾರೆ.
ನನ್ನ ವಿವರವಾದ ಅಫಿಡವಿಟ್ ಹೊರತಾಗಿಯೂ, ಸಾಕಷ್ಟು ದೃಢವಾದ ಸಾಕ್ಷ್ಯಗಳು ಮತ್ತು ಸ್ಪಷ್ಟವಾದ ಹೇಳಿಕೆಗಳು, ನನ್ನ ಲೈಂಗಿಕ ಕಿರುಕುಳದ ಅನುಭವ ಮತ್ತು ಅದರ ಪರಿಣಾಮವಾಗಿ ನಾನು ಹಿಂಸೆ ಅನುಭವಿಸಿದ್ದನ್ನು ಸ್ಪಷ್ಟವಾಗಿ ದಾಖಲಿಸಿದ್ದೇನೆ. ಆದರೂ ಸಮಿತಿ ನನ್ನ ದೂರು ಮತ್ತು ಅಫಿಡವಿಟ್ನಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ ಎಂದು ಮಹಿಳೆ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆಂತರಿಕ ವಿಚಾರಣಾ ಸಮಿತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ನೀಡಿ ನಿನ್ನೆ ವರದಿ ನೀಡಿದ್ದು, ಮಹಿಳೆ ಆರೋಪ ಆಧಾರ ರಹಿತ ಎಂದು ಹೇಳಿತ್ತು. ಆದರೆ ಸಮಿತಿ ವರದಿಯನ್ನು ತಿರಸ್ಕರಿಸಿರುವ ದೂರುದಾರ ಮಹಿಳೆ ಮತ್ತು ಕೆಲವು ಮಹಿಳಾ ಸಂಘಟನೆಗಳು, ಸಮಿತಿ ವರದಿ ವಿರೋಧಿಸಿ ಇಂದು ಸುಪ್ರೀಂಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದರು.
ಸಮಿತಿಯ ವರದಿಯನ್ನು ದೂರುದಾರ ಮಹಿಳೆಗೆ ನೀಡದಿರುವುದು ವಿಚಾರಣೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಬೃಂದಾ ಕಾರಟ್ ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಸುಪ್ರೀಂಕೋರ್ಟ್‌ನ ಕೆಲವು ಮಹಿಳಾ ವಕೀಲರು ಮತ್ತು ಖಾಸಗಿ ಎನ್‌ಜಿಒ ಸಂಸ್ಥೆಗಳು ಭಾಗವಹಿಸಿದ್ದವು.
ಈ ಮಧ್ಯೆ, ಸುಪ್ರೀಂಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ, ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರು ಇದ್ದ ಈ ಸಮಿತಿಯ ವರದಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮಹಾಕಾರ್ಯದರ್ಶಿ ತಿಳಿಸಿದ್ದಾರೆ.
SCROLL FOR NEXT