ದೇಶ

ಮಮತಾ ಬ್ಯಾನರ್ಜಿ ಫೋಟೋ ತಿರುಚಿ ಜೈಲು ಪಾಲಾಗಿದ್ದ ಬಿಜೆಪಿ ಕಾರ್ಯಕರ್ತೆಗೆ 'ಸುಪ್ರೀಂ' ಜಾಮೀನು

Srinivasamurthy VN
ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಚಿತ್ರವನ್ನು ಫೋಟೋಶಾಪ್ ಮಾಡಿ ಜೈಲುಪಾಲಾಗಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 'ಎಂಇಟಿ ಗಾಲಾ - 2019' ಫ್ಯಾಷನ್ ಶೋನಲ್ಲಿ ಕಾಣಿಸಿಕೊಂಡ ರೀತಿಯಲ್ಲಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ಎಡಿಟ್ ಮಾಡಿ, ಪಶ್ಚಿಮ ಬಂಗಾಳದ ಯುವ ನಾಯಕಿ, ಹೌರಾ ಜಿಲ್ಲೆಯ ಬಿಜೆಪಿ ಸಂಚಾಲಕಿ ಪ್ರಿಯಾಂಕ ಶರ್ಮಾ ಎನ್ನುವವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.  ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಮುಖಂಡ ವಿಭಾಸ್ ಹಜ್ರಾ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು. 
ಈ ಸಂಬಂಧ ತನಿಖೆ ನಡೆಸಿದ್ದ ಹೌರಾ ಪೊಲೀಸರು ಪ್ರಿಯಾಂಕ ಶರ್ಮಾ ಅವರನ್ನು ಬಂಧಿಸಿದ್ದರು. 
ಇದೀಗ ಪ್ರಿಯಾಂಕ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಪ್ರಿಯಾಂಕಾ ಶರ್ಮಾ ಅವರು ಕೋರ್ಟ್ ಗೆ ಲಿಖಿತ ರೂಪದಲ್ಲಿ ಕ್ಷಮೆ ಕೋರಿದ್ದು, ಇದೇ ಕಾರಣಕ್ಕೆ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಪ್ರಿಯಾಂಕ ಶರ್ಮಾ ಅವರಿಗೆ ಜಾಮೀನು ನೀಡಿದೆ.
ಇದೇ ವೇಳೆ ಪ್ರಿಯಾಂಕಾ ಶರ್ಮಾ ಅವರ ಬಂಧನ ಪ್ರಕ್ರಿಯೆ ಕುರಿತು ಉದ್ಭವವಾಗಿರುವ ವಿವಾದದ ಕುರಿತೂ ಗಮನ ಹರಿಸಿರುವ ಕೋರ್ಟ್ ಪಶ್ಚಿಮ ಬಂಗಾಳ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಪ್ರಿಯಾಂಕಾ ಶರ್ಮಾ ಪರ ಬಿಜೆಪಿ ವಕ್ತಾರರೂ ಕೂಡ ಆಗಿರುವ ವಕೀಲ ನೀರಜ್ ಕಿಶನ್ ಕೌಲ್ ಅವರ ವಕಾಲತ್ತು ವಹಿಸಿಕೊಂಡಿದ್ದರು.
ಇದಕ್ಕೂ ಮೊದಲು ಪ್ರಿಯಾಂಕಾ ಶರ್ಮಾ ಬಂಧನ ಪ್ರಹಸನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಿಯಾಂಕಾ ಶರ್ಮಾ ಅವರ ತಾಯಿ, ನನ್ನ ಮಗಳು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೇ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದರು. ಆಕೆ ಇದಕ್ಕೂ ಮೊದಲು ಟಿಎಂಸಿ ಪರ ಕೆಲಸ ಮಾಡುತ್ತಿದ್ದಳು. ಆಗ ಯಾವುದೇ ಸಮಸ್ಯೆಯಾಗಿರಲಿಲ್ಲ. ಈಗ ಬಿಜೆಪಿಯಲ್ಲಿದ್ದಾಳೆ ಎಂಬ ಕಾರಣಕ್ಕೇ ನಮಗೆ ಹಿಂಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
SCROLL FOR NEXT