ದೇಶ

ಗೋಡ್ಸೆ ಪರ ವಕಾಲತ್ತು: 10 ದಿನಗಳೊಳಗೆ ವಿವರಣೆ ನೀಡುವಂತೆ ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂಚನೆ!

Srinivasamurthy VN
ನವದೆಹಲಿ: ಮಹಾತ್ಮ ಗಾಂಧಿ ಹತ್ಯೆಗೈದಿದ್ದ ನಾಥೂರಾಮ್ ಗೋಡ್ಸೆ ಪರ ಮಾತನಾಡಿದ್ದ ಬಿಜೆಪಿ ನಾಯಕರಿಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಶಾಕ್ ನೀಡಿದ್ದು 10 ದಿನಗಳೊಳಗೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ಈ ಹಿಂದೆ ಅಲ್ಪ ಸಂಖ್ಯಾತರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ್ದ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, ಭಾರತದ ಮೊದಲ ಭಯೋತ್ಪಾದಕ ಹಿಂದೂ ಆತನ ಹೆಸರು ನಾಥೂರಾಮ್ ಗೋಡ್ಸೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕಮಲ್ ಹಾಸನ್ ಅವರ ಹೇಳಿಕೆ ವಿರುದ್ಧ ದೇಶದಾದ್ಯಂತ ಪರ ವಿರೋಧ ಚರ್ಚೆಗಳು ಭುಗಿಲೆದ್ದಿವೆ. 
ನಾಥೂರಾಮ್ ಗೋಡ್ಸೆ ವಿರುದ್ಧ ಕಮಲ್ ಹಾಸನ್ ಹೇಳಿಕೆ ನೀಡಿದ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಗೋಡ್ಸೆ ಪರ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಬೆಜೆಪಿ ಲೋಕಸಭಾ ಕ್ಷೇತ್ರದ ಭೋಪಾಲ್ ಅಭ್ಯರ್ಥಿ ಹಾಗೂ ವಿವಾದಿತ ಸನ್ಯಾಸಿನಿ ಸಾಧ್ವಿ ಪ್ರಗ್ಯಾ ಸಿಂಗ್ ಗೋಡ್ಸೆ ಪರ ಮಾತನಾಡಿ ಗೋಡ್ಸೆ ಅತ್ಯಂತ ದೊಡ್ಡ ದೇಶ ಪ್ರೇಮಿ ಎಂದು ಹೇಳಿ ವಿವಾದ್ಕಕೆ ಗ್ರಾಸವಾಗಿದ್ದರು. ಬಳಿಕ ಬಿಜೆಪಿ ನಾಯಕರಿಂದಲೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕ್ಷಮೆ ಕೇಳಿದರು. 
ಇದೇ ರೀತಿ ಕರ್ನಾಟಕದ ಸಂಸದ ಹಾಗೂ ಬಿಜೆಪಿ ಮುಖಂಡ ನಳೀನ್ ಕುಮಾರ್ ಕಟೀಲ್ ಅವರೂ ಕೂಡ ಗೋಡ್ಸೆ ಪರ ವಕಾಲತ್ತು ವಹಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ನಳೀನ್ ಕುಮಾರ್ ಕಟೀಲ್, ' ಗಾಂಧಿಯನ್ನು ಕೊಂದ ಗೋಡ್ಸೆ 'ಹಿಂದೂ ಉಗ್ರ'ನಾಗಲು ಹೇಗೆ ಸಾಧ್ಯ? ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? . ಎಂದು ಪ್ರಶ್ನೆ ಮಾಡಿದ್ದರು.
ಅಂತೆಯೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರೂ ಕೂಡ ಗೋಡ್ಸೆ ಚರ್ಚೆಗೆ ಸೇರ್ಪಡೆಯಾಗಿ, 'ಗೋಡ್ಸೆ ಬಗ್ಗೆ ಚರ್ಚೆ ನಡೆಸುತ್ತಿರುವುದು ಸಂತೋಷ ತಂದಿದೆ. ನಾಥುರಾಮ್ ಗೋಡ್ಸೆ ಈ ಚರ್ಚೆಯನ್ನು ನೋಡಿ ಸಂತೋಷ ಪಡಬಹುದು ಎಂದು ಟ್ವೀಟ್ ಮಾಡಿದ್ದರು. ಆವರ ಈ ಟ್ವೀಟ್ ವಿವಾದಕ್ಕೆ ಗ್ರಾಸವಾದ ಬೆನ್ನಲ್ಲೇ ಅದನ್ನು ಡಿಲೀಟ್ ಮಾಡಿ, ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆ ಈ ಮೂವರು ನಾಯಕರ ಟ್ವೀಟ್ ಮತ್ತು ಹೇಳಿಕೆಗಳು ಬಿಜೆಪಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದು, ಈ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿವರಣೆ ಕೇಳಿದ್ದಾರೆ. ಆ ಮೂಲಕ ಗೋಡ್ಸೆ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
SCROLL FOR NEXT