ದೇಶ

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಬಂಪರ್: ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

Raghavendra Adiga
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿವಿ ಸದಾನಂದ ಗೌಡರಿಗೆ ರಾಸಾಯನಿಕ  ರಸಗೊಬ್ಬರ ಖಾತೆ ನೀಡಿದ್ದರೆ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಪ್ರಹ್ಲಾದ ಜೊಷಿಯವರಿಗೆ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿಗಾರಿಕೆ ಖಾತೆ ಜವಾಬ್ದಾರಿ ವಹಿಸಲಾಗಿದೆ. ಇನ್ನು ಬೆಳಗಾವಿ ಸಂಸದ ಸುರೇಶ್ ಅಂಗಡಿಯವರನ್ನು ರೈಲ್ವೆ ರಾಜ್ಯ ಖಾತೆ ಸಚಿವರಾಗಿ ಮಾಡಲಾಗಿದೆ.
ವಿಶೇಹವೆಂದರೆ ಈ ಹಿಂದೆ ಬೆಂಗಳುರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಅನಂತ್ ಕುಮಾರ್ ನಿಭಾಯಿಸುತ್ತಿದ್ದ ಎರಡೂ ಖಾತೆಗಳೂ ರಾಜ್ಯದ ಸಚಿವರ ಪಾಲಾಗಿದೆ. ಅನಂತ್ ಕುಮಾರ್ ಈ ಹಿಂದೆ  ರಸಾಯನಿಕ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಜವಾಬ್ದಾರಿ ಹೊತ್ತಿದ್ದರು. ಈ ಬಾರಿಯ ಸಂಪುಟದಲ್ಲಿ ರಾಸಾಯನಿಕ ರಸಗೊಬ್ಬರ ಖಾತೆ ಸದಾನಂದ ಗೌಡರಿಗೆ ಸಿಕ್ಕಿದರೆ ಸಂಸದೀಯ ವ್ಯವಹಾರ ಪ್ರಹ್ಲಾದ್ ಜೋಷಿ ಪಾಲಾಗಿದೆ.
ಇನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರುಗೆ ಈ ಬಾರಿ ಹಣಕಾಸು ಖಾತೆ ವಹಿಸಲಾಗಿದೆ. ಈ ಮೂಲಕ ಪೂರ್ಣ ಪ್ರಮಾಣದಲ್ಲಿ ಹಣಕಾಸು ಸಚಿವರಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಸೀತಾರಾಮನ್ ಭಾಜನರಾಗಿದ್ದಾರೆ.
SCROLL FOR NEXT