ದೇಶ

ಪಿ.ಚಿದಂಬರಂ ಆರೋಗ್ಯವಾಗಿದ್ದಾರೆ, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ: ಏಮ್ಸ್ ವರದಿ

Srinivasamurthy VN

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬಂರಂ ಅವರ ಆರೋಗ್ಯ ಸರಿ ಇದ್ದು, ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯವಿಲ್ಲ ಎಂದು ಏಮ್ಸ್ ಆಸ್ಪತ್ರೆಯ ವೈದ್ಯರ ಸಮಿತಿ ದೆಹಲಿ ಹೈಕೋರ್ಟ್ ಗೆ ವರದಿ ನೀಡಿದೆ.

ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬಂರಂ ಈ ಹಿಂದೆ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಿಬಿಐ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಚಿದಂಬರಂ ಆರೋಗ್ಯ ತಪಾಸಣೆಗಾಗಿ ದೆಹಲಿಯ ಏಮ್ಸ್ ವೈದ್ಯರ ಸಮಿತಿಯೊಂದನ್ನು ರಚಿಸಿ ತಪಾಸಣೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು.

ಇದೀಗ ಚಿದಂಬರಂ ಅವರ ಆರೋಗ್ಯ ತಪಾಸಣೆ ಮಾಡಿರುವ ವೈದ್ಯರ ಸಮಿತಿ ದೆಹಲಿ ಹೈಕೋರ್ಟ್ ಗೆ ತಮ್ಮ ವರದಿ ನೀಡಿದ್ದು, ವರದಿಯಲ್ಲಿ ಚಿದಂಬಂರಂ ಅವರ ಆರೋಗ್ಯ ಸರಿ ಇದ್ದು, ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದೆ. ಆದರೆ ಚಿದಂಬರಂ ಅವರ ಆರೋಗ್ಯದ ನಿಟ್ಟಿನಲ್ಲಿ ತಿಹಾರ್ ಜೈಲಿನಲ್ಲಿ ಅವರಿಗೆ ಮಿನರಲ್ ವಾಟರ್ ಮತ್ತು ಮನೆ ಊಟ ನೀಡುವಂತೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.

ಏಮ್ಸ್ ವರದಿ ಪಿ ಚಿದಂಬರಂ ಅವರ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದು, ಮತ್ತಷ್ಟು ದಿನಗಳ ಕಾಲ ಮಾಜಿ ಕೇಂದ್ರ ಸಚಿವರು ತಿಹಾರ್ ಜೈಲಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ಬಂದಂತಾಗಿದೆ.

SCROLL FOR NEXT