ದೇಶ

ವಾಟ್ಸ್‌ ಆ್ಯಪ್ ಮೂಲಕ ಐಎಸ್‌ಐ ಮಹಿಳಾ ಏಜೆಂಟ್‌ಗೆ ಮಾಹಿತಿ: ಇಬ್ಬರು ಯೋಧರ ಬಂಧನ

Lingaraj Badiger

ಜೈಪುರ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮಹಿಳಾ ಏಜೆಂಟ್‌ಗೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇಲೆ ಭಾರತೀಯ ಸೇನೆಯ ಇಬ್ಬರು ಯೋಧರನ್ನು ಮಂಗಳವಾರ ರಾಜಸ್ಥಾನದ ಜೋಧ್ ಪುರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಈ ಇಬ್ಬರು ಯೋಧರು ಫೋಖ್ರಾನ್‌ನಿಂದ ತಮ್ಮ ಹಳ್ಳಿಗೆ ತೆರಳುತ್ತಿದ್ದ ವೇಳೆ ಗುಪ್ತಚರ ಇಲಾಖೆ ಅಧಿಕಾರಿಗಳು ಜೋಧ್‌ಪುರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನಿ ಮಹಿಳೆಯ ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಈ ಇಬ್ಬರು ಯೋಧರು ಫೇಸ್‌ಬುಕ್ ಮತ್ತು ವಾಟ್ಸ್‌ ಆ್ಯಪ್ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ಜೈಪುರಕ್ಕೆ ಕರೆದೊಯ್ಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಯೋಧರು ಹನಿಟ್ರ್ಯಾಪ್‌ಗೆ ಒಳಗಾಗಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ರಾಜಸ್ಥಾನದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.

ಓರ್ವ ಯೋಧ ಮಧ್ಯ ಪ್ರದೇಶ ಹಾಗೂ ಮತ್ತೊರ್ವ ಯೋಧ ಅಸ್ಸಾಂನವರಾಗಿದ್ದು, ಸೇನಾ ಸಲಕರಣೆಗಳ ವಿವರ, ರಾಜಸ್ಥಾನದಲ್ಲಿ ಸೇನಾ ನಿಯೋಜನೆ ಸೇರಿದಂತೆ ಅನೇಕ ರಹಸ್ಯ ಮಾಹಿತಿಗಳನ್ನು ಐಎಸ್‌ಐ ಮಹಿಳಾ ಏಜೆಂಟ್‌ಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

SCROLL FOR NEXT