ದೇಶ

ನಮಗೆ ಮತ್ತೊಂದು ಬಾಬ್ರಿ ಮಸೀದಿ ಬೇಡ, ಶಾಂತಿ ಬೇಕು: ಭಾರತೀಯ ಯುವ ಮುಸ್ಲಿಮರು 

Manjula VN

ನವದೆಹಲಿ: 60 ವರ್ಷಗಳಿಗೂ ಹೆಚ್ಚು ಕಾಲ ವಿವಾದದಲ್ಲಿರುವ ರಾಮಜನ್ಮಭೂಮಿ ವಿವಾದಕ್ಕೆ ಶನಿವಾರ ಸುಪ್ರೀಂಕೋರ್ಟ್ ತೆರೆ ಎಳೆಯಲಿದ್ದು, ಈ ನಡುವೆ ಹೇಳಿಕೆ ನೀಡಿರುವ ಭಾರತೀಯ ಯುವ ಮುಸ್ಲಿಮರು ನಮಗೆ ಮತ್ತೊಂದು ಬಾಬ್ರಿ ಮಸೀದಿ ಬೇಡ, ಶಾಂತಿ ಬೇಕೆಂದು ಹೇಳಿದ್ದಾರೆ. 

ವಿವಾದ ಸಂಬಂಧ ಉತ್ತರಪ್ರದೇಶದಲ್ಲಿ ಹಿಂಸಾಚಾರ ಸೃಷ್ಟಿಯಾದಾಗ ಜಾವೆದ್ ರೆಹ್ಮಾನ್ ಎಂಬುವವರು ರಾಜ್ಯವನ್ನೇ ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜಾವೆದ್ ಅವರು, ನ್ಯಾಯಾಲಯದ ತೀರ್ಪು ದೇಗುಲದ ಪರವಾಗಿ ಬಂದರೂ ಸರಿ. ದೇವರ ಹೆಸರಿನಲ್ಲಿ ನಮ್ಮ ಮನೆಗಳು ಸುಟ್ಟುಹೋಗುವುದು ನಮಗೆ ಬೇಡ ಎಂದು ಹೇಳಿದ್ದಾರೆ. 

ಕಾಲೇಜು ವಿದ್ಯಾರ್ಥಿನಿ ರಿಯಾ ಖಾನ್ ಮಾತನಾಡಿ, ಭಾರತದಲ್ಲಿರುವ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುವುದು ನಮಗೆ ಬೇಡ. ಸುಪ್ರೀಂಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ. ನಮಗೆ ಶಾಂತಿ ಬೇಕೆಂದು ತಿಳಿಸಿದ್ದಾರೆ. 

ಹಿಂಸಾಚಾರ ನೋಡುವುದು ನಮಗಿಷ್ಟವಿಲ್ಲ. ದಾವೆ ಹೂಡಿರುವ ಮೂವರು ಕಕ್ಷಿದಾರರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ವಿವಾದಕ್ಕೆ ತೆರೆ ಎಳೆಯಬೇಕು ಎಂದು ಅಮಾನುಲ್ ಅಖ್ತರ್ ಎಂಬುವವರು ಹೇಳಿದ್ದಾರೆ. 

ವಿವಾದಿತ ಪ್ರದೇಶದಲ್ಲಿ ಆಸ್ಪತ್ರೆ ಹಾಗೂ ಶಾಲೆಗಳನ್ನು ನಿರ್ಮಾಣ ಮಾಡಬೇಕು. ಇದು ಉತ್ತರಪ್ರದೇಶ ರಾಜ್ಯದಲ್ಲಿ ಕಡು ಬಡತನದಲ್ಲಿರುವ ಜನರಿಗೆ ಸಹಾಯವಾಗಬೇಕೆಂದು ಹೇಳಿದ್ದಾರೆ. 

SCROLL FOR NEXT