ದೇಶ

ಎನ್ ಡಿಎ ಮೈತ್ರಿಕೂಟ ತೊರೆಯಿರಿ: ಶಿವಸೇನೆಗೆ ಎನ್ ಸಿಪಿ ಷರತ್ತು!

Srinivasamurthy VN

ಮುಂಬೈ: ಎನ್ ಡಿಎ ಮೈತ್ರಿಕೂಟ ತೊರೆದರೆ ಮಾತ್ರ ಶಿವಸೇನೆಗೆ ಬೆಂಬಲ ನೀಡುವುದಾಗಿ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ತಾನು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಹಿಂದೆ ಸರಿಯುತ್ತಲೇ ಮಹಾರಾಷ್ಟ್ರದಲ್ಲಿ ಮತ್ತೆ ಸರ್ಕಾರ ರಚನೆ ರಾಜಕೀಯ ಗರಿಗೆದರಿದ್ದು, ಶಿವಸೇನೆಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿರುವ ಎನ್ ಸಿಪಿ ಅದಕ್ಕೆ ಷರತ್ತುವೊಂದನ್ನು ವಿಧಿಸಿದೆ.

ಹೌದು.. ಶಿವಸೇನೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ತೊರೆದರೆ ಮಾತ್ರ ತಾನು ಶಿವಸೇನೆಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಅತ್ತ ಮಹಾರಾಷ್ಟ್ರ ರಾಜ್ಯಪಾಲರು ಶಿವಸೇನೆಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡುತ್ತಿದ್ದಂತೆಯೇ ಇತ್ತ ಸುದ್ದಿಗೋಷ್ಠಿ ಕರೆದ ಎನ್ ಸಿಪಿ ಎನ್ ಡಿಎ ಮೈತ್ರಿಕೂಟ ತೊರೆದರೆ ಮಾತ್ರ ಶಿವಸೇನೆಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.

ಈ ಕುರಿತಂತೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎನ್ ಸಿಪಿ ಮುಖಂಡ ನವಾಬ್ ಮಲ್ಲಿಕ್ ಅವರು, ಎನ್ ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಶಿವಸೇನೆಗೆ ಬೆಂಬಲ ನೀಡುವ ಕುರಿತು ಚಿಂತಿಸಬಹುದು. ಆದರೆ ಆ ಪಕ್ಷ ಮೊದಲು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ತೊರೆಯಬೇಕು. ಅಷ್ಟು ಮಾತ್ರವಲ್ಲದೇ ಕೇಂದ್ರ ಸರ್ಕಾರದಿಂದಲೂ ಬೆಂಬಲ ವಾಪಸ್ ಪಡೆಯಬೇಕು. ಒಂದು ವೇಳೆ ಶಿವಸೇನೆ ಎನ್ ಡಿಐ ಮೈತ್ರಿಕೂಟ ತೊರೆಯದಿದ್ದರೆ ನಾವು ಕಾದುನೋಡುತ್ತೇವೆ ಎಂದು ಹೇಳಿದ್ದಾರೆ.

ಅಂತೆಯೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ವಿರೋಧಿಸಿರುವ ಅವರು, ನಮಗೆ ಪೂರ್ಣ ಬಹುಮತ ಇರದೇ ಇರಬಹುದು. ಆದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT