ದೇಶ

ಐನ್‌ಸ್ಟೀನ್ ಸಾಪೇಕ್ಷತಾ ಸಿದ್ಧಾಂತಕ್ಕೆ ಸಡ್ಡು ಹೊಡೆದಿದ್ದ ಗಣಿತಜ್ಞ ಇನ್ನಿಲ್ಲ!

Raghavendra Adiga

ವಿಶ್ವ ಕಂಡ ಅಪರೂಪದ ಭೌತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನು ಪ್ರಶ್ನಿಸಿದ್ದ ಖ್ಯಾತ ಗಣಿತಜ್ಞ ವಸಿಷ್ಠ ನಾರಾಯಣ್ ಸಿಂಗ್(74)  ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. 

ಏಪ್ರಿಲ್ 2, 1942 ರಂದು ಜನಿಸಿದ್ದ  ವಸಿಷ್ಠ ನಾರಾಯಣ್ ಸಿಂಗ್, ಕಳೆದ 40 ವರ್ಷಗಳಿಂದ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ವಸಿಷ್ಠ ನಾರಾಯಣ್ ಸಿಂಗ್ ಅವಿಭಜಿತ ಬಿಹಾರದ ನೇತರ್ಹಾಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ಪಾಟ್ನಾ ವಿಜ್ಞಾನ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ವಸಿಷ್ಠ, ಮುಂದೆ 1965 ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಹೆಚ್ವಿನ ವ್ಯಾಸ್ಯಾಂಗ ಮಾಡಿದರು. 

ಮುಂದೆ 1969 ರಲ್ಲಿ ಸೈಕಲ್ ವೆಕ್ಟರ್ ಬಾಹ್ಯಾಕಾಶ ಸಿದ್ಧಾಂತದ ಕುರಿತು ವಸಿಷ್ಠ ನಾರಾಯಣ್ ಸಿಂಗ್ ಪಿಎಚ್‌ಡಿ ಪ್ರಬಂಧ ಮಂಡಿಸಿದ್ದರು. ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT)ಮತ್ತು ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಶಿಕ್ಷಕರಾಗಿಯೂ ವಸಿಷ್ಠ ಸೇವೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ, ಬಿಹಾರ ಸಿಎಂ ನಿತೀಶ್ ಸಂತಾಪ

ಖ್ಯಾತ ಗಣಿತಜ್ಞ ವಸಿಷ್ಠ ನಾರಾಯಣ್ ಸಿಂಗ್ ಅವರ ಸಾವು ವಿಜ್ಞಾನ ಕ್ಷೇತ್ರದಲ್ಲಿ ಅಪರೂಪದ ಪ್ರತಿಭೆಯ ನಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ."ಗಣಿತಜ್ಞ ವಸಿಷ್ಠ ನಾರಾಯಣ್ ಸಿಂಗ್ ಅವರ ಸಾವಿನ ಸುದ್ದಿಯಿಂದ ಬೇಸರಗೊಂಡಿದ್ದೇನೆ. ಅವರ ಮರಣಕ್ಕೆ  ದೇಶವು ವಿಜ್ಞಾನ ಕ್ಷೇತ್ರದಲ್ಲಿ ತನ್ನ ಅಪರೂಪದ ಪ್ರತಿಭೆಗಳಲ್ಲಿ ಒಂದನ್ನು ಕಳೆದುಕೊಂಡಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ವಸಿಷ್ಠ ನಾರಾಯಣ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ವಸಿಷ್ಠ ಅವರ ನಿಧನದಿಂದ ದೇಶದ ವಿಜ್ಞಾನ ಕ್ಷೇತ್ರ ಬಡವವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ವಸಿಷ್ಠ ಅವರನ್ನು ಪೂರ್ಣ ರಾಜ್ಯ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು ಎಂದು ನಿತೀಶ್ ಘೋಷಿಸಿದ್ದಾರೆ. 

SCROLL FOR NEXT